Saturday, April 17, 2021
Home ಸುದ್ದಿ ಜಾಲ ರೈತ ಪ್ರತಿಭಟನೆ ಸ್ಥಳಕ್ಕೆ ಮಹಾತ್ಮ ಗಾಂಧಿ ಮೊಮ್ಮಗಳು ‘ತಾರಾ ಗಾಂಧಿ’ಭೇಟಿ

ಇದೀಗ ಬಂದ ಸುದ್ದಿ

ರೈತ ಪ್ರತಿಭಟನೆ ಸ್ಥಳಕ್ಕೆ ಮಹಾತ್ಮ ಗಾಂಧಿ ಮೊಮ್ಮಗಳು ‘ತಾರಾ ಗಾಂಧಿ’ಭೇಟಿ

 ಗಾಜಿಯಾಬಾದ್: ದೆಹಲಿ-ಉತ್ತರಪ್ರದೇಶದ ಗಡಿಯಲ್ಲಿರುವ ಪ್ರತಿಭಟನೆ ನಡೆಸುತ್ತಿರುವ ರೈತ ಚಳುವಳಿಗಾರರನ್ನು ಮಹಾತ್ಮ ಗಾಂಧಿಯವರ ಮೊಮ್ಮಗಳಾದ 84 ವರ್ಷದ ತಾರಾ ಗಾಂಧಿ ಭಟ್ಟಾಚಾರ್ಜಿ ಭೇಟಿ ಮಾಡಿದ್ದಾರೆ. ನ್ಯಾಷನಲ್ ಗಾಂಧಿ ಮೂಸಿಯಂನ ಅಧ್ಯಕ್ಷರೂ ಆದ ಭಟ್ಟಾಚಾರ್ಜಿ ರೈತರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕೆಂದು ಕಿವಿಮಾತು ಹೇಳಿದ್ದಾರೆ. ಜೊತೆಗೆ ಸರ್ಕಾರಕ್ಕೆ ರೈತ ಸಮುದಾಯವನ್ನು ‘ನೋಡಿಕೊಳ್ಳುವಂತೆ’ ಆಗ್ರಹಿಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್​(ಬಿಕೆಯು)ನ ಪತ್ರಿಕಾ ಹೇಳಿಕೆ ತಿಳಿಸಿದೆ.

ಗಾಜಿಪುರದ ಪ್ರತಿಭಟನಾ ಸ್ಥಳಕ್ಕೆ ಶನಿವಾರ (ಫೆಬ್ರವರಿ 13) ಭೇಟಿ ನೀಡಿದ ಭಟ್ಟಾಚಾರ್ಜಿ, ರೈತರಿಗಾಗಿ ಪ್ರಾರ್ಥನೆ ಮಾಡಲು ಬಂದಿರುವುದಾಗಿ ಹೇಳಿದ್ದಾರೆ. ‘ನಮ್ಮ ಜೀವನ ಪರ್ಯಂತ ನಮಗೆ ಊಟ ನೀಡಿರುವ ರೈತರಿಗಾಗಿ ಇಲ್ಲಿಗೆ ಬಂದಿದ್ದೀವಿ… ರೈತರ ಹಿತದಲ್ಲಿ ದೇಶದ ಮತ್ತು ನಮ್ಮೆಲ್ಲರ ಹಿತವಿದೆ’ ಎಂದ ಅವರು, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಸುತ್ತಿರುವ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಬಿಕೆಯು ಹೇಳಿದೆ.

ಭಟ್ಟಾಚಾರ್ಜಿ ಅವರೊಂದಿಗೆ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ರಾಮಚಂದ್ರ ರಾಹಿ, ನಿರ್ದೇಶಕ ಸಂಜಯ ಸಿಂಘಾ, ಆಲ್ ಇಂಡಿಯಾ ಸರ್ವ್ ಸೇವಾ ಸಂಘ ಮ್ಯಾನೇಜಿಂಗ್ ಟ್ರಸ್ಟಿ ಅಶೋಕ್ ಶರಣ್ ಮತ್ತು ನ್ಯಾಷನಲ್ ಗಾಂಧಿ ಮ್ಯೂಸಿಯಂನ ನಿರ್ದೇಶಕ ಎ.ಅಣ್ಣಾಮಲೈ ಅವರೂ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ದೆಹಲಿ ಗಡಿಪ್ರದೇಶಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರದಲ್ಲಿ ಕಳೆದ ನವೆಂಬರ್ ತಿಂಗಳಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಅವರೊಂದಿಗೆ ಈವರೆಗೆ ಹನ್ನೊಂದು ಸುತ್ತಿನ ಮಾತುಕತೆ ನಡೆಸಿದ್ದು, ಸಮಸ್ಯೆ ಇನ್ನೂ ಬಗೆಹರಿದಿಲ್ಲ.

TRENDING