ಗುವಾಹಟಿ: ಅಸ್ಸಾಂನಲ್ಲಿ ಸಿಎಎ ಕಾಯ್ದೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಅಸ್ಸಾಂನ ಶಿವನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ಜಗತ್ತಿನ ಯಾವುದೇ ಶಕ್ತಿ ಅಸ್ಸಾಂ ಅನ್ನು ಇಬ್ಭಾಗ ಮಾಡಲು ಸಾಧ್ಯವಿಲ್ಲ. ಅಸ್ಸಾಂ ಒಪ್ಪಂದವನ್ನು ಮುಟ್ಟಲು ಯಾರನ್ನೂ ಬಿಡುವುದಿಲ್ಲ. ಇಲ್ಲಿ ದ್ವೇಷವನ್ನು ಹರಡಲು ಯಾರೇ ಪ್ರಯತ್ನಿಸಿದರೂ, ಅಂತವರಿಗೆ ಕಾಂಗ್ರೆಸ್ ಪಕ್ಷ ಮತ್ತು ಅಸ್ಸಾಂ ಜನರು ಒಂದಾಗಿ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಅಸ್ಸಾಂನ ಚಹಾ ತೋಟಗಳಲ್ಲಿ ದುಡಿಯುವ ಕಾರ್ಮಿಕರಿಗೆ ದಿನವೊಂದಕ್ಕೆ ₹ 167 ಸಿಗುತ್ತದೆ. ಆದರೆ ಗುಜರಾತ್ನ ವ್ಯಾಪಾರಿಗಳಿಗೆ ಚಹಾ ತೋಟಗಳೇ ಸಿಕ್ಕಿವೆ. ನಾವು ಅಧಿಕಾರಕ್ಕೆ ಬಂದರೆ ಇಲ್ಲಿನ ಚಹಾ ತೋಟಗಳ ಕಾರ್ಮಿಕರಿಗೆ ₹ 365 ದೊರೆಯಲಿದೆ. ಅದು ಎಲ್ಲಿಂದ ದೊರೆಯಲಿದೆ? ಅದನ್ನು ಗುಜರಾತಿ ವ್ಯಾಪಾರಿಗಳಿಂದ ದೊರಕಿಸಿ ಕೊಡಲಾಗುತ್ತದೆ’ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಸಿಎಎ ಕಾಯ್ದೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಇದೇ ಸಮಯದಲ್ಲಿ ಹೇಳಿದ್ದಾರೆ.
ಅಸ್ಸಾಂನದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಐದು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಹೇಳಿದೆ.
ವಿವಿಧ ಪಕ್ಷಗಳೊಂದಿಗಿನ ಚರ್ಚೆಯ ನಂತರ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್) ಮತ್ತು ಅಂಚಲಿಕ್ ಗಣ ಮೋರ್ಚಾಗಳೊಂದಿಗೆ ಕಾಂಗ್ರೆಸ್ ಕೈಜೋಡಿಸಲು ನಿರ್ಧರಿಸಿದೆ ಎಂದು ಎಪಿಸಿಸಿ ಅಧ್ಯಕ್ಷ ರಿಪುನ್ ಬೋರಾ ತಿಳಿಸಿದ್ದಾರೆ.