Tuesday, April 13, 2021
Home ಜಿಲ್ಲೆ ಮೈಸೂರು ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್ : ಸಚಿವ ಎಸ್.ಟಿ.ಸೋಮಶೇಖರ್

ಇದೀಗ ಬಂದ ಸುದ್ದಿ

ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್. ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಇದು ಪೂರಕ ಎನಿಸಲಿದೆ  ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಮೈಸೂರಿನ‌ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು  ಇಂದು ದೇಶದ 728 ಜಿಲ್ಲಾ ಕೇಂದ್ರಗಳಲ್ಲಿ ಈ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯದ ಪ್ರಮುಖ ಅಂಶಗಳನ್ನು ವಿವರಿಸಿದರು.

ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರದ ಮುಂದೆ ಇನ್ನಷ್ಟು ತೆರಿಗೆ ವಿಧಿಸಿ ಹಣ ಸಂಗ್ರಹಿಸುವುದು ಅಥವಾ ಸಾಲ ಮಾಡಿಯಾದರೂ ಹೆಚ್ಚು ಮೂಲಸೌಕರ್ಯ ಒದಗಿಸುವುದು, ಹಣಕಾಸು ಚಟುವಟಿಕೆ ಹೆಚ್ಚಳ ಹಾಗೂ ಉತ್ಪಾದನೆ ಹೆಚ್ಚಳದ ಎರಡು ಆಯ್ಕೆಗಳಿದ್ದವು. ಇದರಲ್ಲಿ ಎರಡನೇ ಆಯ್ಕೆ ನಮ್ಮದಾಯಿತು. ಇದು ಭಾರತವನ್ನು 2025ರ ವೇಳೆಗೆ 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆಯತ್ತ ಒಯ್ಯಲಿದೆ ಎಂದು ತಿಳಿಸಿದರು.

ಇದೊಂದು ಐತಿಹಾಸಿಕ ಬಜೆಟ್. ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಇದು ಪೂರಕ ಎನಿಸಲಿದೆ. ಎರಡನೇ ವಿಚಾರ ಕಷ್ಟದಾಯಕವಿದ್ದರೂ ಜನರ ಹಿತದೃಷ್ಟಿಯಿಂದ ಈ ವಿಚಾರವನ್ನು ಆಯ್ಕೆ ಮಾಡಲಾಯಿತು. ಅಂತರರಾಷ್ಟ್ರೀಯ ಹಣಕಾಸು ನಿಧಿಯೂ (ಐಎಂಎಫ್) ಭಾರತವು ಅತಿ ವೇಗದಿಂದ ಅಭಿವೃದ್ಧಿ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇದೇಕಾರಣಕ್ಕೆ ನಾವು ಮೂಲ ಸೌಕರ್ಯಕ್ಕೆ ಗರಿಷ್ಠ ಒತ್ತನ್ನು ನೀಡಲಾಗಿದೆ.

ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ವಿವಿಧ ಕ್ಷೇತ್ರಗಳ ಮೂಲಸೌಕರ್ಯ ವೃದ್ಧಿಗೆ ಒಟ್ಟಾಗಿ ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಭಾರತ ಜಗತ್ತಿನ ಆರೋಗ್ಯದ ಕೇಂದ್ರ (ಹಬ್) ಆಗುವತ್ತ ಮುನ್ನಡೆಯಲಿದೆ. ಕಳೆದ ಸಾಲಿನ 94 ಸಾವಿರಕೋಟಿರೂ. ಬದಲು ಈ ಬಾರಿ ಈ ಕ್ಷೇತ್ರದ ಹೂಡಿಕೆಯನ್ನು 2,23,000 ಕೋಟಿಗೆ ಏರಿಸಲಾಗಿದೆ. ಇದರಿಂದ ಬೃಹತ್ ಆರೋಗ್ಯ ಮೂಲ ಸೌಕರ್ಯ ಕೇಂದ್ರವಾಗಿ ಭಾರತವು ಬೆಳೆಯಲಿದೆ.

2021-22ನೇ ಸಾಲಿನ ಕೇಂದ್ರ ಬಜೆಟ್ ನಡಿ ಕೇಂದ್ರ ಸರಕಾರವು 34,83,236 ಕೋಟಿ ರೂಪಾಯಿಗಳನ್ನು ವಿವಿಧ ಕ್ಷೇತ್ರಗಳಡಿ ವ್ಯಯಿಸಲು ಉದ್ದೇಶಿಸಿದೆ. ವಿತ್ತೀಯ ಕೊರತೆ ಕಳೆದ ಬಾರಿ ಶೇಕಡ 4.6ರಷ್ಟಿದ್ದುದು ಈ ಬಾರಿ ಶೇಕಡ 6.8ರಷ್ಟು ಇದ್ದರೂ, ಮೂಲಭೂತ ಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡುವ ಕಾರಣ ಸರಕು ಸೇವಾ ಕ್ಷೇತ್ರ, ಆರೋಗ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಎನಿಸಲಿದ್ದು, ಈ ಬಜೆಟ್ ಅನ್ನು ಸ್ವಾಗತಿಸುತ್ತೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

TRENDING