Saturday, April 17, 2021
Home ಸುದ್ದಿ ಜಾಲ ಜಮ್ಮು-ಕಾಶ್ಮೀರ: T R F ನ ಕುಖ್ಯಾತ ಉಗ್ರ ಝಹೂರ್ ಅಹ್ಮದ್ ಬಂಧನ

ಇದೀಗ ಬಂದ ಸುದ್ದಿ

ಜಮ್ಮು-ಕಾಶ್ಮೀರ: T R F ನ ಕುಖ್ಯಾತ ಉಗ್ರ ಝಹೂರ್ ಅಹ್ಮದ್ ಬಂಧನ

ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಮಹತ್ವದಕಾರ್ಯಾಚರಣೆಯೊಂದರಲ್ಲಿ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಉಗ್ರಗಾಮಿ ಸಂಘಟನೆಯ ಕುಖ್ಯಾತ ಭಯೋತ್ಪಾದಕ ಝಹೂರ್ ಅಹ್ಮದ್’ನನ್ನು ಬಂಧನಕ್ಕೊಳಪಡಿಸಲಾಗಿದೆ.

ಬಂಧನಕ್ಕೊಳಗಾಗಿರುವ ಉಗ್ರ ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಪೊಲೀಸ್ ಪೇದೆ ಹಾಗೂ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದ. ಈತನಿಗಾಗಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದರು.

ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಝಹೂರ್ ಅಹ್ಮದ್ ರ್ಯಾದರ್ ಅಲಿಯಾಸ್, ಸಾಹಿಲ್, ಖಾಲಿದ್ ಸಾಂಬಾ ಜಿಲ್ಲೆಯಲ್ಲಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಅನಂತ್ ನಾಗ್ ಜಿಲ್ಲೆಯ ಪೊಲೀಸರಿಗೆ ತಿಳಿದುಬಂದಿತ್ತು. ಕೂಡಲೇ ಭದ್ರತಾಪಡೆಗಳೊಂದಿಗೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಝಹೂರ್ ದಕ್ಷಿಣ ಕಾಶ್ಮೀರದ ನಿವಾಸಿಯಾಗಿದ್ದು, ಪಾಕಿಸ್ತಾನ ಮೂಲದ ವ್ಯಕ್ತಿಯಿಂದ ಶಸ್ತ್ರಾಸ್ತ್ರ ಪಡೆದುಕೊಳ್ಳುವ ಸಲುವಾಗಿ ಸಾಂಬಾ ಜಿಲ್ಲೆಗೆ ಬಂದಿದ್ದ. ಆದರೆ, ಶಸ್ತ್ರಾಸ್ತ್ರ ನೀಡಲು ಬಂದಿದ್ದ ವ್ಯಕ್ತಿಯನ್ನು ಕೆಲ ದಿನಗಳ ಹಿಂದಷ್ಟೇ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಇದೀಗ ಝಹೂರ್ ನನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

2004ರಲ್ಲಿ ಝಹೂರ್ ಶಸ್ತ್ರಾಸ್ತ್ರ ತರಬೇತಿ ಪಡೆಯುವ ಸಲುವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ್ದ. ಬಳಿಕ ಹಿಂತಿರುಗಿ ಬರುವಾಗ 5 ವಿದೇಶಿ ಉಗ್ರರೊಂದಿಗೆ ಭಾರತಕ್ಕೆ ಬಂದಿದ್ದ. ಇದಾದ 2 ವರ್ಷಗಳ ಬಳಿಕ ಪೊಲೀಸರ ಬಳಿ ಶರಣಾಗಿದ್ದ. ಆದರೆ, ಕೆಲ ವರ್ಷಗಳ ಬಳಿಕ ಟಿಆರ್’ಎಫ್’ಗೆ ಸೇರ್ಪಡೆಗೊಳ್ಳುವ ಮೂಲಕ ಮತ್ತೆ ಉಗ್ರ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದ.

ಬಂಧಿತ ಝಹೂರ್ ನನ್ನು ಇದೀಗ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈತ ನೀಡಿದ ಮಾಹಿತಿ ಮೇರೆಗೆ ಮತ್ತಷ್ಟು ದಾಳಿಗಳು ಹಾಗೂ ಮತ್ತಷ್ಟು ಜನರನ್ನು ಬಂಧನಕ್ಕೊಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

TRENDING