Tuesday, April 13, 2021
Home ದೇಶ ಚೀನಾಗೆ ಒಂದಿಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ: ಕೇಂದ್ರ ರಕ್ಷಣಾ ಸಚಿವಾಲಯ

ಇದೀಗ ಬಂದ ಸುದ್ದಿ

ಚೀನಾಗೆ ಒಂದಿಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ: ಕೇಂದ್ರ ರಕ್ಷಣಾ ಸಚಿವಾಲಯ

ನವದೆಹಲಿ: ಪೂರ್ವ ಲಡಾಖ್’ನ ಪ್ಯಾಂಗಾಂಗ್ ತ್ಸೊ ಸರೋವರದ ಪ್ರದೇಶದಲ್ಲಿನ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಚೀನಾದೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಭಾರತದ ಒಂದಿಂಚು ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.

ಭಾರತವು ಚೀನಾಗೆ ತನ್ನ ಭೂ ಪ್ರದೇಶವನ್ನು ಬಿಟ್ಟುಕೊಟ್ಟಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಂಭೀರ ಆರೋಪಕ್ಕೆ ಸಂಸತ್ತಿನಲ್ಲಿ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.

ಸೇನಾ ಸಿಬ್ಬಂದಿಯ ತ್ಯಾಗದಿಂದ ಮಾಡಿದ ಸಾಧನೆಯ ಮೇಲೆ ಶಂಕೆ ಪಡುವುದು ನಿಜಕ್ಕೂ ಯೋಧರಿಗೆ ತೋರುವ ಅಗೌರವ. ಭಾರತದ ಭೂಪಟದಲ್ಲಿರುವ ಭೂ ಭಾಗದ ಪೈಕಿ 43 ಸಾವಿರ ಚದರ ಕಿಲೋ ಮೀಟರ್ 1962ರಿಂದ ಚೀನಾ ಅತಿಕ್ರಮಣದಲ್ಲಿದೆ. ಭಾರತದ ಪರಿಕಲ್ಪನೆಯ ಪ್ರಕಾರ ಎಲ್‌ಎ’ಸಿ ಇರುವುದು ಫಿಂಗರ್ 8ರಿಂದಲೇ ಹೊರತು ಫಿಂಗರ್ 4ರಿಂದಲ್ಲ. ಹಾಗಾಗಿಯೇ ಫಿಂಗರ್ 8ರವರೆಗೂ ನಾವು ಗಸ್ತು ತಿರುಗುವ ಹಕ್ಕನ್ನು ಉಳಿಸಿಕೊಂಡಿದ್ದೇವೆ.

ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಎರಡೂ ದೇಶಗಳು ಶಾಶ್ವತ ನೆಲೆ ಹೊಂದಿವೆ. ಭಾರತವು ಫಿಂಗಲ್ 3ರ ಬಳಿ ಇರುವ ಧಾನ್ ಸಿಂಗ್ ಥಾಪಾ ಬಳಿ ನೆಲೆ ಹೊಂದಿದ್ದರೆ, ಚೀನಾದ ನೆಲೆ ಫಿಂಗರ್ 8ರ ಪೂರ್ವಕ್ಕಿದೆ. ಭಾರತದ ಭೂ ಭಾಗ ಫಿಂಗರ್ 4ರವರೆಗೆ ಮಾತ್ರ ಇದೆ ಎಂಬುದೇ ತಪ್ಪು ಎಂದು ಸ್ಪಷ್ಟನೆ ನೀಡಿದೆ.

ಸಂಸತ್ತಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು, ಚೀನಾ ಬಿಕ್ಕಟ್ಟಿನ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಡಿ ರೀತಿ ಹೇಳಿಕೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇಕೆ ಸಂಸತ್ತಿನಲ್ಲಿ ಹೇಳಿಕೆ ನೀಡಲಿಲ್ಲ? ನಾನು ಚೀನಾಕ್ಕೆ ಭಾರತದ ಜಾಗ ಬಿಟ್ಟುಕೊಟ್ಟಿದ್ದೇನೆ ಎಂದು ಮೋದಿಯವರು ಸತ್ಯ ಹೇಳಬೇಕಿತ್ತು. ಪ್ಯಾಂಗಾಂಗ್ ಸರೋವರದ ಫಿಂಗರ್ 4ರವರೆಗೂ ನಮ್ಮದೇ ಜಾಗ. ಅಲ್ಲಿ ನಮ್ಮ ಪಡೆಗಳು ಇರುತ್ತಿದ್ದವು. ಈಗ ಫಿಂಗರ್ 4ನಿಂದ ಫಿಂಗರ್ 3ಕ್ಕೆ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಈ ಜಾಗವನ್ನು ಮೋದಿಯವರು ಚೀನಾಗೆ ಬಿಟ್ಟುಕೊಟ್ಟಿದೇಕೆ? ಇದಕ್ಕೆ ಅವರು ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಭಾರತೀಯ ಸೇನಾಪಡೆಗಳು ಕಷ್ಟಪಟ್ಟು ಕೈಲಾಶ್ ಪರ್ವತ ಶ್ರೇಣಿಯನ್ನು ವಶಪಡಿಸಿಕೊಂಡಿದ್ದವು. ಆ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದು ಏಕೆ? ದೆಪ್ಸಾಂಗ್’ನಂತಹ ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಪ್ರದೇಶದಿಂದ ಚೀನಿಯರೇಕೆ ಹಿಂದೆ ಸರಿದಿಲ್ಲ? ಗೋಗ್ರಾ ಹಾಟ್ ಸ್ಟ್ರಿಂಗ್ ನಿಂದಲೂ ಅವರು ಯಾಕೆ ವಾಪಸ್ ಹೋಗಿಲ್ಲ? ಎಂದು ಪ್ರಶ್ನಿಸಿದ್ದರು.

ಇದು 100ಕ್ಕೆ ನೂರರಷ್ಟು ಶುದ್ಧ ಹೇಡಿತನ. ಚೀನಾದ ಎದುರು ನಿಲ್ಲದ ಪ್ರಧಾನಿ ಮೋದಿಯವರು ಹೇಡಿ. ನಮ್ಮ ಸೇನೆಯ ಬಲಿದಾನಕ್ಕೆ ಅವರು ವಂಚನೆ ಮಾಡಿದ್ದಾರೆಂದು ಕಿಡಿಕಾರಿದ್ದರು.

.

TRENDING