Saturday, April 17, 2021
Home ಸುದ್ದಿ ಜಾಲ ಮೈಸೂರು: 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

ಇದೀಗ ಬಂದ ಸುದ್ದಿ

ಮೈಸೂರು: 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

ಮೈಸೂರು: ರಸ್ತೆ ಸುರಕ್ಷತಾ ಸಮಿತಿ ಮೈಸೂರು, 32 ನೇ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ರಸ್ತೆ ಸುರಕ್ಷತೆ ಜೀವದ ರಕ್ಷೆ ಧ್ಯೇಯದಡಿ ಪ್ರಾದೇಶಿಕ ಸಾರಿಗೆ ಕಛೇರಿ ಮೈಸೂರು ಪಶ್ಚಿಮ ವತಿಯಿಂದ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷೆ ಕುರಿತು ಜಾಗೃತಿ ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್. ದೀಪಕ್ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಾಹನ ಚಾಲನೆ ಮಾಡುವವರು ತಮ್ಮ, ಜೀವಕ್ಕೂ ಬೇರೆಯವರ ಜೀವಕ್ಕೂ ಅಪಾಯವಾಗದಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ಸಿಗ್ನಲ್ ಜಂಪ್ ಮಾಡಿಕೊಂಡು ಹೋಗಿ ಅಪಾಯಕ್ಕೆ ಆಹ್ವಾನ ನೀಡಬಾರದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂದು ಕಿವಿ ಮಾತು ಹೇಳಿದರು.

ಅಧಿಕ್ಷಕ ಎಂ.ಕುಮಾರ್  ಮಾತನಾಡಿ ರಸ್ತೆ ನಿಯಮಗಳನ್ನು ಅರಿತು ಚಾಲಕರೊಂದಿಗೆ ಸಹಕರಿಸಬೇಕು. ವಾಹನ ಚಾಲನೆ ಮಾಡುವಾಗ ನಿಮ್ಮ ಗಮನ ರಸ್ತೆಯ ಮೇಲಿರಬೇಕು.  ಪಾದಚಾರಿಗಳು ರಸ್ತೆಗಳನ್ನು ದಾಟುವಾಗ ನಿಗದಿಪಡಿಸಿದ ಜಾಗಲ್ಲಿಯೇ ದಾಟಬೇಕು. ಕೆಂಪು ದೀಪ ಬಂದಾಗ ನಿಲ್ಲಿ, ಹಸಿರು ದೀಪ ಬಂದಾಗ ಬೇಗನೆ ಹೋಗಿ, ರಸ್ತೆಯಲ್ಲಿ ನಡೆಯುವ ಶಿಸ್ತಿನ ಶಿಕ್ಷಣವನ್ನು ಮನೆಯಿಂದಲೇ ಪ್ರಾರಂಭಿಸಿ. ರಸ್ತೆ ದಾಟುವಾಗ ವಾಹನಗಳನ್ನು ನೋಡುತ್ತಿರಿ, ಶಬ್ದಕ್ಕೆ ಕಿವಿಗೊಡಿವಾಹನ ಒಂದು ಯಾಂತ್ರಿಕ ವಸ್ತುವಾಗಿದ್ದು ಅದರ   ಬ್ರೇಕ್ ಮೇಲೆ ಪೂರ್ಣ ಭರವಸೆ ಬೇಡ. ನಿಮ್ಮ ಸುರಕ್ಷತೆಯೇ ನಿಯಮಗಳ ಉದ್ದೇಶವಾಗಿದೆ. ನೀವೂ ಬದುಕಿ, ಇತರರನ್ನೂ ಬದುಕಲು ಬಿಡಿ, ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಜೀವನ ಅಮೂಲ್ಯವಾಗಿದ್ದು, ಜಾಗರೂಕತೆಯಿಂದ ವಾಹನ ಚಲಾಯಿಸಿ ಎಂದರು.

ಈ ಸಂದರ್ಭ ಸಹಾಯಕ ಪ್ರಾದೇಶಿಕ  ಸಾರಿಗೆ ಅಧಿಕಾರಿ ವಸಂತ್ ಕುಮಾರ್, ನಿರೀಕ್ಷಕರಾದ ಶ್ರೀಧರ್, ಇಮ್ತಿಯಾಜ್ ಪಾಷಾ, ಅಧೀಕ್ಷಕರಾದ ಮಂಜುನಾಥ್ ಬಿ.ಎನ್, ಬಸಪ್ಪ ಕರೀಂ ಮತ್ತಿತರರು ಉಪಸ್ಥಿತರಿದ್ದರು.

ನಿಯಮಿತ ವೇಗದಲ್ಲಿ ವಾಹನ ಚಲಾಯಿಸಿ ಅಪಘಾತಗಳನ್ನು ತಪ್ಪಿಸಿ, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿಯೇ ವಾಹನ ಚಲಾಯಿಸೋಣ, ಅಮಲಿನಲ್ಲಿ ವಾಹನ ಚಾಲನೆ ಯಮನಲ್ಲಿಗೆ ನೇರ ರವಾನೆ ಇತ್ಯಾದಿ ಫಲಕಗಳನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಸಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

TRENDING