ವಾಷಿಂಗ್ಟನ್,ಫೆ. 11: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ಮತ್ತೆ ಆರಂಭವಾಗುವ ಯಾವ ಸಾಧ್ಯತೆಯೂ ಇಲ್ಲ ಎಂದು ಟ್ವಿಟ್ಟರ್ ಸ್ಪಷ್ಟಪಡಿಸಿದೆ.
ಟ್ವಿಟ್ಟರನ್ ಸಿಎಫ್ಒ ಸಿಎನ್ಬಿಸಿಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.ಟ್ವಿಟ್ಟರ್ನ ನಿಯಮಗಳನ್ನು ಡೊನಾಲ್ಡ್ ಟ್ರಂಪ್ ಉಲ್ಲಂಘಿಸಿದ್ದಾರೆ. ಒಮ್ಮೆ ಟ್ವಿಟ್ಟರ್ನಿಂದ ವ್ಯಕ್ತಿಯನ್ನು ನಿಷೇಧಿಸಿದರೆ ಮತ್ತೆ ಅದನ್ನು ಹಿಂಪಡೆಯಲು ಸಾಧ್ಯವೇ ಇಲ್ಲ .
ಹೀಗಾಗಿ ಒಂದೊಮ್ಮೆ ಅಮೆರಿಕದ ಮುಂದಿನ ಚುನಾವಣೆಯಲ್ಲೂ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಮರು ಆಯ್ಕೆಯಾದರೂ ಕೂಡ ಅವರ ಟ್ವಿಟ್ಟರ್ ಖಾತೆ ಹಿಂಪಡೆಯಲು ಅಸಾಧ್ಯ.
ಮತ್ತೆ ಡೊನಾಲ್ಡ್ ಟ್ರಂಪ್ ಕಾಣಿಸಿಕೊಳ್ಳುವ ಯಾವ ಸಾಧ್ಯತೆಯೂ ಇಲ್ಲ ಎಂದು ಟ್ವಿಟ್ಟರ್ ಸಿಎಫ್ಒ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೊಮ್ಮೆ ಮೈಕ್ರೋ ಬ್ಲಾಗಿಂಗ್ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ.
ಇದರೊಂದಿಗೆ ಟ್ವಿಟ್ಟರ್ ಹಾಗೂ ಟ್ರಂಪ್ ಬೆಂಬಲಿಗರ ನಡುವಿನ ಶೀತಲ ಸಮರ ಇನ್ನಷ್ಟು ತಾರಕಕ್ಕೇರಿದೆ. ಅಮೆರಿಕದಲ್ಲಿ ಕಳೆದ ಒಂದೆರೆಡು ತಿಂಗಳಿಂದ ಟ್ರಂಪ್ ಹಾಗೂ ಟ್ವಿಟ್ಟರ್ ನಡುವೆ ಆನ್ಲೈನ್ ವೇದಿಕೆಯಲ್ಲಿ ಸಮರ ನಡೆಯುತ್ತಲೇ ಇತ್ತು.
ಅಧ್ಯಕ್ಷೀಯ ಚುನಾವಣೆಯ ಬಳಿಕ, ಅಮೆರಿಕದಲ್ಲಿ ಅದರಲ್ಲೂ ವಿಶೇಷವಾಗಿ ವಾಷಿಂಗ್ಟನ್ ನಲ್ಲಿ ನಡೆದ ಗಲಭೆಯ ಹಿಂದೆ ಟ್ರಂಪ್ ಕೈವಾಡವಿದೆ ಎನ್ನುವ ಆರೋಪವಿದೆ. ಇದಕ್ಕೆ ಸಂಬಂಧಿಸಿ ಈಗ ಟ್ರಂಪ್ ವಿರುದ್ಧ ಸೆನೆಟ್ನಲ್ಲಿ ವಿಚಾರಣೆಯೂ ನಡೆಯುತ್ತಿದೆ.