Saturday, April 17, 2021
Home ದೆಹಲಿ ಲೋಕಸಭೆಯಲ್ಲಿ ಕೃಷಿ ಕಾಯ್ದೆ ವಿರುದ್ಧ ಧ್ವನಿಯೆತ್ತಿದ ರಾಹುಲ್ ಗಾಂಧಿ

ಇದೀಗ ಬಂದ ಸುದ್ದಿ

ಲೋಕಸಭೆಯಲ್ಲಿ ಕೃಷಿ ಕಾಯ್ದೆ ವಿರುದ್ಧ ಧ್ವನಿಯೆತ್ತಿದ ರಾಹುಲ್ ಗಾಂಧಿ

ನವದೆಹಲಿಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುರುವಾರದಂದು ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು ಇಲ್ಲಿದೆ.

ರೈತರು ಕದಲುವುದಿಲ್ಲ:
ವಿವಾದಿಕ ಕೃಷಿ ಕಾಯ್ದೆಯನ್ನು ಹಿಂಪೆಡಯುವ ವರೆಗೂ ರೈತರು ಎಲ್ಲಿಯೂ ಹೋಗುವುದಿಲ್ಲ. ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಛರಿಸಿದರು.

ದೇಶದ ಆಹಾರ ಭದ್ರತಾ ವ್ಯವಸ್ಥೆಗೆ ಮಾರಕ:
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ದೇಶದ ಆಹಾರ ಭದ್ರತಾ ವ್ಯವಸ್ಥೆಯನ್ನು ನಾಶ ಮಾಡಲಿದ್ದು, ಗ್ರಾಮೀಣ ಆರ್ಥಿಕತೆಗೆ ಹಾನಿಯುಂಟು ಮಾಡಲಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

 ಮೃತಪಟ್ಟ ರೈತರಿಗೆ ಸಂಸತ್ತಿನಲ್ಲಿ ರಾಹುಲ್ ಸಂತಾಪ:
ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಿರತರಾಗಿದ್ದ 200ರಷ್ಟು ರೈತರು ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆಗಳು ಹೇಳುತ್ತಿದ್ದಾರೆ. ಇದನ್ನು ಲೋಕಸಭೆಯಲ್ಲಿ ಉಲ್ಲೇಖಿಸಿರುವ ರಾಹುಲ್ ಗಾಂಧಿ, ವಿಪಕ್ಷದವರ ಜೊತೆಗೂಡಿ ಎರಡು ನಿಮಿಷಗಳ ಮೌನ ಆಚರಿಸಿ ಸಂತಾಪವನ್ನು ಸೂಚಿಸಿದರು.

ರಾಹುಲ್ ಗಾಂಧಿ ಅವರಿಗೆ ತೃಣಮೂಲ ಕಾಂಗ್ರೆಸ್ ಹಾಗೂ ಡಿಎಂಕೆ ಸಂಸದರು ಬೆಂಬಲ ನೀಡಿದರು. ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗಾಗಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಸಂತಾಪ ಸೂಚಿಸದ ಹಿನ್ನೆಲೆಯಲ್ಲಿ ತಾವೇ ಇದನ್ನು ಮಾಡುತ್ತಿರುವುದಾಗಿ ರಾಹುಲ್ ಗಾಂಧಿ ಹೇಳಿದರು.

ದೇಶವನ್ನು 4 ಜನರು ಮುನ್ನಡೆಸುತ್ತಾರೆ: ರಾಹುಲ್ ಆರೋಪ
ಫ್ಯಾಮಿಲಿ ಯೋಜನೆಗಾಗಿ ‘ಹಮ್ ದೋ ಹಮಾರೇ ದೋ’ ಎಂಬ ಘೋಷಣೆಯಿತ್ತು. ಕೊರೊನಾ ಬೇರೆ ರೂಪದಲ್ಲಿ ಹಿಂತಿರುಗಿದಾಗ ಈ ಘೋಷಣೆಯು ವಿಭಿನ್ನ ರೂಪದಲ್ಲಿ ಮರಳಿದೆ. ದೇಶವನ್ನು ನಾಲ್ಕು ಜನರು ಮುನ್ನಡೆಸುತ್ತಾರೆ. ಅವರು ಯಾರೆಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ‘ಹಮ್ ದೋ, ಹಮಾರೇ ದೋ’ ಇದು ಯಾರ ಸರ್ಕಾರ ? ಎಂದು ಪ್ರಶ್ನಿಸಿದರು.

ದೇಶದ ಬೆಳೆ ಉದ್ಯಮ ಮಿತ್ರರಿಗೆ ರವಾನೆ: ರಾಹುಲ್ ಆರೋಪ
ಓರ್ವ ಮಿತ್ರನಿಗೆ ದೇಶದೆಲ್ಲ ಫಸಲುಗಳನ್ನು ನೀಡುವುದು ಮೊದಲ ಕೃಷಿ ಕಾನೂನಿನ ಉದ್ದೇಶವಾಗಿದೆ. ಇದರಿಂದ ನಷ್ಟ ಯಾರಿಗೆ ? ಸಣ್ಣ ಉದ್ಯಮಿ ಮತ್ತು ಮಂಡಿಯಲ್ಲಿ ಕೆಲಸ ಮಾಡುವವರಿಗೆ. ಎರಡನೇ ಕಾನೂನಿನ ಉದ್ದೇಶ ಎರಡನೇ ಸ್ನೇಹಿತನಿಗೆ ಸಹಾಯ ಮಾಡುವುದು. ದೇಶದ ಶೇಕಡಾ 40ರಷ್ಟು ಬೆಳೆಯನ್ನು ಆತ ತನ್ನ ಸಂಗ್ರಹದಲ್ಲಿ ಕೂಡಿಡುತ್ತಾನೆ ಎಂದು

ರಾಹುಲ್ ಗಾಂಧಿ ಆರೋಪಿಸಿದರು.

ಮೂರನೇ ಕಾನೂನಿನ ವಿಷಯವೆಂದರೆ ದೇಶದ ಓರ್ವ ರೈತ ತನ್ನ ಬೆಳೆಗಳಿಗೆ ಸರಿಯಾದ ನ್ಯಾಯ ಬೆಲೆ ನೀಡುವಂತೆ ಭಾರತದ ಅತಿ ದೊಡ್ಡ ಉದ್ಯಮಿಯ ಬಳಿ ಹೋದಾಗ, ಅವನಿಗೆ ನ್ಯಾಯಾಲಯಕ್ಕೆ ಹೋಗುವ ಅವಕಾಶವಿರುವಿಲ್ಲ ಎಂದು ಹೇಳಿದರು.

ದೊಡ್ಡ ಉದ್ಯಮಿಗಳು ತಮಗೆ ಬೇಕಾದಷ್ಟು ಆಹಾರ ಧ್ಯಾನ, ಹಣ್ಣುಹಂಪಲು ಹಾಗೂ ತರಕಾರಿಗಳನ್ನು ರಹಸ್ಯವಾಗಿ ಕೂಡಿಡಬಹುದು ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಪ್ರಧಾನಿ ನೀಡಿದ 3 ಆಯ್ಕೆಗಳು: ಹಸಿವು, ನಿರುದ್ಯೋಗ, ಆತ್ಮಹತ್ಯೆ
ರೈತರಿಗೆ ಆಯ್ಕೆಗಳನ್ನು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಹೌದು ನೀವು ಆಯ್ಕೆಗಳನ್ನು ನೀಡಿದ್ದೀರಿ. ಅದೇನೆಂದರೆ ಹಸಿವು, ನಿರುದ್ಯೋಗ ಮತ್ತು ಆತ್ಮಹತ್ಯೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು:
ನಿನ್ನೆ (ಬುಧವಾರ) ಸದನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷಗಳು ಆಂದೋಲನದ ಬಗ್ಗೆ ಮಾತನಾಡುತ್ತಿವೆ. ಆದರೆ ಕೃಷಿ ಕಾನೂನುಗಳ ವಿಷಯ ಹಾಗೂ ಉದ್ದೇಶದ ಬಗ್ಗೆ ಚರ್ಚಿಸುತ್ತಿಲ್ಲ ಎಂದು ಆರೋಪಿಸಿದ್ದರು. ಇಂದು (ಗುರುವಾರ) ನಾನು ಅವರನ್ನು ಸಂತೋಷಪಡಿಸಬೇಕಿದ್ದು, ಕೃಷಿ ಕಾಯ್ದೆಗಳ ಉದ್ದೇಶ ಹಾಗೂ ವಿಷಯಗಳ ಕುರಿತು ಮಾತನಾಡಲಿದ್ದೇನೆ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ತಿರುಗೇಟು ನೀಡಿದರು.

TRENDING