ನವದೆಹಲಿ, ಫೆ.11: ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗು ನಿಯಂತ್ರಿಸಲು ಸರ್ಕಾರವು ಕೊರೊನಾವೈರಸ್ ಲಸಿಕೆ ವಿತರಣೆ ವೇಗವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಒಂದೇ ದಿನ ಲಕ್ಷಾಂತರ ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ.
ಕಳೆದ 26 ದಿನಗಳಲ್ಲಿ 68 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ದೇಶಾದ್ಯಂತ ಇದುವರೆಗೂ 68,26,898 ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಜಿಲ್ಲಾಧಿಕಾರಿ ಸೇರಿದಂತೆ ಸರ್ಕಾರದ ಪ್ರಮುಖ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ.
ದೇಶದಲ್ಲಿ ಎರಡನೇ ಹಂತದ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಲಾಗಿದ್ದು, ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ಟಾಪ್-5 ರಾಜ್ಯಗಳು
ರಾಜ್ಯ – ಲಸಿಕೆ ಹಾಕಿಸಿಕೊಂಡ ಫಲಾನುಭವಿಗಳು
ಉತ್ತರ ಪ್ರದೇಶ – 6,73,542
ಗುಜರಾತ್ – 6,05,494
ಮಹಾರಾಷ್ಟ್ರ – 5,59,152
ರಾಜಸ್ಥಾನ – 5,04,564
ಕರ್ನಾಟಕ – 4,61,478