Wednesday, January 27, 2021
Home ಸುದ್ದಿ ಜಾಲ ಅಕ್ರಮ ಆಸ್ತಿ ಪ್ರಕರಣ: ಮತ್ತೊಮ್ಮೆ ಸಿಬಿಐ ವಿಚಾರಣೆ ಎದುರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ

ಇದೀಗ ಬಂದ ಸುದ್ದಿ

ಅಕ್ರಮ ಆಸ್ತಿ ಪ್ರಕರಣ: ಮತ್ತೊಮ್ಮೆ ಸಿಬಿಐ ವಿಚಾರಣೆ ಎದುರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ

ಬೆಂಗಳೂರು, ಜ.12: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೊಮ್ಮೆ ಸಿಬಿಐ ವಿಚಾರಣೆ ಎದುರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್​ 25 ರಂದೇ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಡಿ.ಕೆ. ಶಿವಕುಮಾರ್​ ಅವರಿಗೆ ಸಮನ್ಸ್​ ನೀಡಿದ್ದರು. ಅದರಂತೆ 2020 ನವೆಂಬರ್ 25 ರಂದು ಡಿ.ಕೆ. ಶಿವಕುಮಾರ್ ವಿಚಾರಣೆ ಎದುರಿಸಿದ್ದರು.

ಇದೀಗ ಎರಡನೇ ಬಾರಿ ಇಂದು ಮತ್ತೆ ಅವರು ಸಿಬಿಐ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ವಿಚಾರಣೆಗೆ ಹೆಚ್ಚುವರಿ ಆಸ್ತಿ ಗಳಿಕೆ ಕುರಿತು ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ, ವಿಚಾರಣೆಯಲ್ಲಿ ಡಿಕೆಶಿ ಎದುರು ಸಿಬಿಐ ಅಧಿಕಾರಿಗಳು ನಿಖರವಾಗಿ ಯಾವ ಪ್ರಶ್ನೆಗಳನ್ನು ಮುಂದಿಟ್ಟರು? ವಿಚಾರಣೆ ಯಾವ ಹಂತದಲ್ಲಿದೆ? ಎಂಬಿತ್ಯಾದಿ ಮಾಹಿತಿಗಳು ಲಭ್ಯವಾಗಬೇಕಿದೆ?

ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್​ ಅವರ ಮನೆ ಮತ್ತು ಕಚೇರಿಗಳ ಮೇಲೆ ಕಳೆದ ವರ್ಷವೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿ ಜೈಲಿಗೂ ಕಳಿಸಿದ್ದರು.

ಇದಾದ ನಂತರ ಜಾಮೀನಿನ ಮೇಲೆ ಡಿ.ಕೆ. ಶಿವಕುಮಾರ್​ ಹೊರ ಬಂದಿದ್ದರು. ಈ ನಡುವೆ ಮತ್ತೆ ಅಕ್ಟೋಬರ್ 5 ರಂದು ಡಿಕೆಶಿಗೆ ಸೇರಿದ 14 ಕಡೆ ಸಿಬಿಐ ಅಧಿಕಾರಿಗಳಿಂದ ದಾಳಿ ನಡೆದಿತ್ತು.

ಡಿ.ಕೆ. ಶಿವಕುಮಾರ್​ ವಿರುದ್ಧ ತೀವ್ರ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು.

ಇದೇ ಕಾರಣಕ್ಕೆ ಸಿಬಿಐ ಅಧಿಕಾರಿಗಳು ಕಳೆ ಅಕ್ಟೋಬರ್​ನಲ್ಲಿ ಡಿಕೆ ಶಿವಕುಮಾರ್​ ಮತ್ತು ಅವರ ಸಂಬಂಧಿಗಳ ಮನೆ ಮತ್ತು ಕಚೇರಿಯ ಮೇಲೆ ದಾಳಿ ಸಂಘಟಿಸಿದ್ದರು.

ಈ ಸಂದರ್ಭದಲ್ಲಿ 74.96 ಕೋಟಿ ಹೆಚ್ಚುವರಿ ಆಸ್ತಿ ಗಳಿಕೆ ಮಾಡಿರುವುದು ಪತ್ತೆಯಾಗಿತ್ತು. ಅಲ್ಲದೆ, ಅಧಿಕಾರಿಗಳು ಈ ಸಂಬಂಧ ಕೆಲ ಪ್ರಮುಖ ಆಧಾರಗಳನ್ನು ವಶಪಡಿಸಿಕೊಂಡಿದ್ದರು ಎನ್ನಲಾಗಿತ್ತು.

TRENDING