ಬೆಂಗಳೂರು,ಜ.10- ರಾಜ್ಯದಲ್ಲಿ ಕೊರೊನಾ ಲಸಿಕೆಯನ್ನು ನಾನೇ ಮೊದಲು ಪಡೆಯಲು ಸಿದ್ದ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಗರದ ಆನಂದರಾವ್ ವೃತ್ತದ ಬಳಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಕೊರೊನಾ ಲಸಿಕೆ ದಾಸ್ತಾನಿಗೆ ನಡೆದಿರುವ ಸಿದ್ದತೆಗಳನ್ನುಪರಿಶೀಲಿಸಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶವಿದ್ದರೆ ರಾಜ್ಯದಲ್ಲಿ ಕೊರೊನಾ ಲಸಿಕೆಯನ್ನು ಮೊದಲು ನಾನೇ ಪಡೆಯುತ್ತೇನೆ ಎಂದರು. ಲಸಿಕೆ ನೀಡಿಕೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ. ಅದರಲ್ಲಿ ಯಾರಿಗೆ, ಹೇಗೆ, ಯಾವಾಗ? ಲಸಿಕೆ ನೀಡಬೇಕು ಎಂಬ ಅಂಶವನ್ನು ತಿಳಿಸಲಾಗುತ್ತದೆ ಎಂದು ಹೇಳಿದರು.
ಕೋವಿಡ್ ಲಸಿಕೆಯನ್ನು ಜನಪ್ರತಿನಿಗಳು ಪಡೆಯಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲಸಿಕೆ ಕುರಿತು ಯಾವುದೇ ಅನುಮಾನವಿಲ್ಲ, ಯಾವುದೇ ಆತಂಕವೂ ಇಲ್ಲ. ಅವಕಾಶವಿದ್ದರೆ ನಾನೇ ಮೊದಲು ಲಸಿಕೆ ಪಡೆದು ಆರೋಗ್ಯ ಕಾರ್ಯಕರ್ತರ, ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತೇನೆ ಎಂದರು. ಕೊರೊನಾ ಲಸಿಕೆಯ ಮೊದಲ ಕಂತು ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಬರಲಿದ್ದು, ಅದನ್ನು ಸುರಕ್ಷಿತವಾಗಿ ದಾಸ್ತಾನು ಮಾಡಲು ನಡೆದಿರುವ ಸಿದ್ದತೆಗಳನ್ನು ಸಚಿವರು ವಿವರಿಸಿದರು.