ಬೆಂಗಳೂರು : ನವದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬೆಂಗಳೂರಿಗೆ ಸಿಎಂ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಜನವರಿ 13ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಸಚಿವ ಸಂಪುಟಕ್ಕೆ ಏಳು ಮಂದಿ ಸೇರ್ಪಡೆಯಾಗಲಿದ್ದಾರೆ, ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಶಾಸಕರ ಮಾಹಿತಿ ನಾಳೆ ನೀಡುತ್ತೇನೆ. ಎಂದಿದ್ದಾರೆ.
ವರಿಷ್ಟರ ಜತೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಏಳು ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಲು ವರಿಷ್ಟರು ಒಪ್ಪಿಗೆ ನೀಡಿದ್ದಾರೆ. 14 ರಂದು ಸಂಕ್ರಾಂತಿ ಹಬ್ಬ ಇರುವ ಕಾರಣ 13 ರ ಮಧ್ಯಾಹ್ನ ಏಳು ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅವರು ಹೇಳಿದರು.
ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೃಷ್ಣ ಮೆನನ್ ನಲ್ಲಿರುವ ನಿವಾಸದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಚರ್ಚೆ ನಡೆಸಿ ಕೊನೆಗೂ ಸಂಪ ವಿಸ್ತರಣೆಗೆ ಅನುಮತಿ ಪಡೆದು ವಾಪಸ್ಸಾಗಿದ್ದಾರೆ.
ಇದಕ್ಕೂ ಮೊದಲು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು ರಾಷ್ಟ್ರ ನಾಯಕರ ಜೊತೆಗಿನ ಸಭೆ ಸಂತೋಷ ತಂದುಕೊಟ್ಟಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರೆಸಿರುವುದು ವರಿಷ್ಠರಿಗೆ ಸಂತಸ ತಂದಿದೆ.ಇನ್ನು ಮುಂಬರುವ ಮೂರು ಕ್ಷೇತ್ರಗಳ ಉಪ ಚುನಾವಣೆಗಳ ಕುರಿತಾಗಿಯೂ ಮಾತುಕತೆ ನಡೆದಿದ್ದು, ಮೂರೂ ಕ್ಷೇತ್ರಗಳಲ್ಲಿ ಗೆಲ್ಲುವ ಪಣ ತೊಟ್ಟಿರೋದಾಗಿ ತಿಳಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇದೀಗ ಭರದ ಸಿದ್ದತೆ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಹೀಗಾಗಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಸಿದ್ದಪಡಿಸಿ ಹೈಕಮಾಂಡ್ಗೆ ರವಾನಿಸೋದಾಗಿ ಹೇಳಿದ್ದಾರೆ.