Saturday, January 16, 2021
Home ಅಂತರ್ ರಾಜ್ಯ ಹಕ್ಕಿ ಜ್ವರ : ಕಾನ್ಪುರ ಮೃಗಾಲಯದಲ್ಲಿನ ಎಲ್ಲಾ ಪ್ರಭೇದದ ಹಕ್ಕಿಗಳನ್ನು ಕೊಲ್ಲಲು ಆದೇಶ

ಇದೀಗ ಬಂದ ಸುದ್ದಿ

ಹಕ್ಕಿ ಜ್ವರ : ಕಾನ್ಪುರ ಮೃಗಾಲಯದಲ್ಲಿನ ಎಲ್ಲಾ ಪ್ರಭೇದದ ಹಕ್ಕಿಗಳನ್ನು ಕೊಲ್ಲಲು ಆದೇಶ

ಲಖನೌ: ಮೃಗಾಲಯದಲ್ಲಿನ ಕೆಂಪು ಹುಂಜಗಳು (ಕಾಡು ಕೋಳಿಗಳು) ಹಾಗೂ ಇತರ ಎಲ್ಲಾ ಪ್ರಭೇದದ ಹಕ್ಕಿಗಳನ್ನು ಕೊಲ್ಲಲು ಕಾನ್ಪುರ ಮೃಗಾಲಯದ ಆಡಳಿತವು ಭಾನುವಾರ ಆದೇಶಿಸಿದೆ.

ಇತ್ತೀಚೆಗೆ ಮೃಗಾಲಯದ ಆವರಣದಲ್ಲಿ ಮೃತಪಟ್ಟಿದ್ದ ಹಕ್ಕಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನಲ್ಲಿರುವ ‘ಪ್ರಾಣಿಗಳ ರೋಗಗಳ ಕುರಿತಾದ ರಾಷ್ಟ್ರೀಯ ಸಂಸ್ಥೆ’ಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಎರಡು ಹುಂಜಗಳಿಗೆ ಎಚ್‌-5 ಸೋಂಕು ತಗುಲಿರುವುದು ದೃಢಪಟ್ಟಿತ್ತು.

‘ಮುಂಜಾಗ್ರತಾ ಕ್ರಮವಾಗಿ ಅನಿರ್ದಿಷ್ಟಾವಧಿವರೆಗೆ ಮೃಗಾಲಯಕ್ಕೆ ಬೀಗ ಹಾಕಲಾಗಿದ್ದು, ಮುಂದಿನ ಆದೇಶದವರೆಗೂ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಮೃಗಾಲಯದ ಸುತ್ತಲಿನ 1 ಕಿ.ಮೀ. ಪ್ರದೇಶವನ್ನು ಸೋಂಕಿತ ವಲಯ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಹಕ್ಕಿಗಳ ಕೊಲ್ಲುವಿಕೆ ಕಾರ್ಯ ಆರಂಭಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ (ನಗರ) ಅತುಲ್‌ ಕುಮಾರ್‌ ಭಾನುವಾರ ತಿಳಿಸಿದ್ದಾರೆ.

‘ಮೃಗಾಲಯದಲ್ಲಿ ಹಿಂದಿನ ಐದು ದಿನಗಳಲ್ಲಿ ನಾಲ್ಕು ಹುಂಜಗಳು ಹಾಗೂ ಎರಡು ಗಿಳಿಗಳು ಸತ್ತಿವೆ. ಈ ಪೈಕಿ ಎರಡು ಹುಂಜಗಳಿಗೆ ಹಕ್ಕಿ ಜ್ವರ ಇರುವುದು ಖಾತರಿಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ಮೃಗಾಲಯದ ಸುತ್ತಮುತ್ತಲಿನ ಕೋಳಿ ಫಾರಂಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೋಳಿ ಹಾಗೂ ಕುರಿ ಮಾಂಸ ಮಾರಾಟ ಮಾಡುವವರ ಮೇಲೆ ನಿಗಾ ಇಡುವ ಸಲುವಾಗಿ ವಿಶೇಷ ತಂಡಗಳನ್ನೂ ರಚಿಸಲಾಗಿದೆ. ಸತ್ತ ಪಕ್ಷಿಗಳ ವಿಲೇವಾರಿಗೆ ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ.

TRENDING