Tuesday, January 19, 2021
Home ಬೆಂಗಳೂರು ಮಾಜಿ ನ್ಯಾಯಾಧೀಶೆಯಿಂದ ಬರೋಬ್ಬರಿ 8.8 ಕೋಟಿ ರೂ. ಪಡೆದಿದ್ದ ಯುವರಾಜ್ ಸ್ವಾಮಿ!

ಇದೀಗ ಬಂದ ಸುದ್ದಿ

ಮಾಜಿ ನ್ಯಾಯಾಧೀಶೆಯಿಂದ ಬರೋಬ್ಬರಿ 8.8 ಕೋಟಿ ರೂ. ಪಡೆದಿದ್ದ ಯುವರಾಜ್ ಸ್ವಾಮಿ!

 ಬೆಂಗಳೂರು: ಗವರ್ನರ್ ಆಗಲು ಬಯಸಿದ್ದ ನಿವೃತ್ತ ನ್ಯಾಯಾಧೀಶೆಯೊಬ್ಬರು ಬರೋಬ್ಬರಿ 8.8 ಕೋಟಿ ರೂಪಾಯಿಯನ್ನು ಯುವರಾಜ್ ಸ್ವಾಮಿಗೆ ನೀಡಿದ್ದರು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ತನಿಖಾ ಅಧಿಕಾರಿಯಾಗಿರುವ ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಎಚ್ ಎಂ ನಾಗರಾಜ್, ಯುವರಾಜ್ ಗೆ ತಾವು ಹಣ ನೀಡಿರುವುದಾಗಿ ಡಿಸೆಂಬರ್ 21ರಂದು ನಿವೃತ್ತ ಮಹಿಳಾ ನ್ಯಾಯಾಧೀಶರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ತಿಳಿಸಿದ್ದಾರೆ.

ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದ್ದು, ತನಿಖೆ ವೇಳೆ ಸ್ವಾಮಿ ತನ್ನಿಂದ 8.8 ಕೋಟಿ ರೂ. ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಸಾಕಷ್ಟು ಸಂಪರ್ಕ ಹೊಂದಿದ್ದರಿಂದ ಆಕೆಯನ್ನು ರಾಜ್ಯಪಾಲರನ್ನಾಗಿ ನೇಮಿಸಲು ಸಹಾಯ ಮಾಡುವುದಾಗಿ ಸ್ವಾಮಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆತನನ್ನು ನಂಬಿ ಹಲವು ಕಂತುಗಳಲ್ಲಿ ಹಣ ನೀಡಿರುವುದಾಗಿ ನ್ಯಾಯಧೀಶೆ ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗವರ್ನರ್ ಹುದ್ದೆ ಆಕಾಂಕ್ಷಿಯಾಗಿದ್ದ ನಿವೃತ್ತ ನ್ಯಾಯಾಧೀಶೆ ಅವರಿಗೆ ಪೊಲೀಸ್ ಅಧಿಕಾರಿಯೊಬ್ಬರು ಯುವರಾಜ್ ಸ್ವಾಮಿಗೆ ಪರಿಚಯ ಮಾಡಿಸಿದ್ದರು. ಅಲ್ಲದೆ ಈ ಕೆಲಸಕ್ಕಾಗಿ ಪೊಲೀಸ್ ಅಧಿಕಾರಿ ಸ್ವಾಮಿಯಿಂದ ಬರೋಬ್ಬರಿ 2.75 ಕೋಟಿ ರುಪಾಯಿ ಪಡೆದಿದ್ದರು. ಹೀಗಾಗಿ ಸದ್ಯ ಪೊಲೀಸ್ ಅಧಿಕಾರಿ ಯಾರೆಂದು ಸಿಸಿಬಿ ತಲೆಕೆಡಿಸಿಕೊಂಡಿದೆ.

ನಾಗರಬಾವಿ ನಿವಾಸಿ 52 ವರ್ಷದ ಯುವರಾಜ್ ಸ್ವಾಮಿ ಜ್ಯೋತಿಷಿ ಮತ್ತು ವಾಸ್ತು ತಜ್ಞ ಎಂದು ಹೇಳಿಕೊಂಡಿದ್ದು, ಅನೇಕ ಕನ್ನಡ ಚಲನಚಿತ್ರ ನಟರು ಮತ್ತು ಹಿರಿಯ ರಾಜಕಾರಣಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಡಿಸೆಂಬರ್ 16ರಂದು ಆತನನ್ನು ಸಿಸಿಬಿ ಬಂಧಿಸಿತ್ತು.

ಏತನ್ಮಧ್ಯೆ, ಬಿಜೆಪಿ ಮುಖಂಡರಾದ ವಿ ಸೋಮಣ್ಣ, ಲಕ್ಷ್ಮಣ ಸವದಿ ಮತ್ತು ಇತರರೊಂದಿಗೆ ಸ್ವಾಮಿ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಯುವರಾಜ್ ನನ್ನು ಬಂಧಿಸಿದಾಗ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರೊಂದಿಗೆ ತೆಗೆದ ಹಲವಾರು ಫೋಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

TRENDING