ಚಾಮರಾಜನಗರ: ಸಾಲ ಬಾಧೆ ತಾಳಲಾರದೇ ರೈತರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಜ್ಯೋತಿಗೌಡನಪುರದಲ್ಲಿ ಶನಿವಾರ ನಡೆದಿದೆ.
ಗ್ರಾಮದ ರೈತ ಪುಟ್ಟಣ್ಣ (40) ಮೃತಪಟ್ಟವರು. ಕಳೆದ ಎರಡು ಮೂರು ವರ್ಷಗಳಿಂದ ವಿವಿಧ ಬೆಳೆಗಳನ್ನು ಬೆಳೆಯುವ ಸಲುವಾಗಿ ಪುಟ್ಟಣ್ಣ 7-8 ಲಕ್ಷ ರೂ. ಖಾಸಗಿ ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ. ಈ ಸಾಲ ತೀರಿಸಲು ತಮ್ಮ ಜಮೀನನ್ನು ಭೋಗ್ಯಕ್ಕೆ ಹಾಕಿದ್ದು, ಅರ್ಧ ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಭತ್ತ ಬೆಳೆದಿದ್ದರು.
ಈ ಬಾರಿ ಭತ್ತಕ್ಕೆ ದರ ಸಿಗಲಿಲ್ಲ. ಇನ್ನೂ 3 ಲಕ್ಷ ರೂ. ಸಾಲ ಇತ್ತು. ಸಾಲಗಾರರು ಸಾಲ ಮರುಪಾವತಿಸುವಂತೆ ಒತ್ತಡ ಹೇರಿದ್ದರು. ಭೋಗ್ಯಕ್ಕೆ ಹಾಕಿದ ಜಮೀನು ವಾಪಸ್ ಪಡೆಯಲು ಸಾಧ್ಯವಾಗುವುದಿಲ್ಲ. ಈಗಿನ ಸಾಲವನ್ನೂ ತೀರಿಸಲಾಗುತ್ತಿಲ್ಲ ಎಂದು ಪುಟ್ಟಣ್ಣ ತೀವ್ರ ಹತಾಶೆಗೊಂಡಿದ್ದರು ಎಂದು ತಿಳಿದುಬಂದಿದೆ.
ಶನಿವಾರ ಮಧ್ಯಾಹ್ನ ಜಮೀನಿಗೆ ತೆರಳಿ, ತಾವು ಭತ್ತ ಬೆಳೆದಿದ್ದ ಜಾಗದಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಟ್ಟಣ್ಣ ಅವರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ. ಈ ಸಂಬಂಧ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.