Monday, January 18, 2021
Home ಜಿಲ್ಲೆ ಕಾರವಾರದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅಸ್ತು

ಇದೀಗ ಬಂದ ಸುದ್ದಿ

ಕಾರವಾರದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅಸ್ತು

ಕಾರವಾರ: ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಕೊನೆಗೂ ಸಮ್ಮತಿ ನೀಡಿದೆ. ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌. ನಾಯ್ಕ ಅವರ ನಿರಂತರ ಪ್ರಯತ್ನ, ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಾರವಾರದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಇದರೊಂದಿಗೆ ಉತ್ತರಕನ್ನಡ ಜಿಲ್ಲೆಯ ಜನತೆ ಬಹು ಕಾಲದಿಂದ ಕಾಯುತ್ತಿದ್ದ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಕನಸು ನನಸಾಗಲಿದೆ.

ಕಾರವಾರದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಆರಂಭದ ಬಗ್ಗೆ ಸದ್ಯದಲ್ಲೇ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಹೊರ ಬೀಳಲಿದೆ.

ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಈ ಸಂಸ್ಥೆಯನ್ನು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 120 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಶಾಸಕಿ ರೂಪಾಲಿ ಎಸ್‌. ನಾಯ್ಕ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು.

ಶೈಕ್ಷಣಿಕವಾಗಿ ಮುಂದೆಆರೋಗ್ಯ ಕ್ಷೇತ್ರದಲ್ಲಿ ಹಿಂದೆ:
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಹಾಗೂ ಉತ್ತರಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಸಾಧನೆ ಮಾಡಿದ್ದರೂ ಆರೋಗ್ಯ ಕ್ಷೇತ್ರದಲ್ಲಿ ತುಂಬ ಹಿಂದುಳಿದಿದೆ. ಹೃದಯಾಘಾತ, ಬ್ರೈನ್‌ ಹ್ಯಾಮರೇಜ್‌, ಕಿಡ್ನಿ, ಕ್ಯಾನ್ಸರ್‌, ಶ್ವಾಸಕೋಶ ಸಮಸ್ಯೆಯಂತಹ ತುರ್ತು ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಜನರು ತೀವ್ರ ಸಮಸ್ಯೆ ಎದುರಿಸುವಂತಾಗಿತ್ತು.

ಗಂಭೀರ ಕಾಯಿಲೆ, ಅಪಘಾತದಲ್ಲಿ ತೀವ್ರ ಗಾಯಗೊಂಡಾಗ ಅಥವಾ ಅವಘಡ, ದುರಂತದಲ್ಲಿ ಗಂಭೀರ ಪರಿಸ್ಥಿತಿಯಲ್ಲಿ ಇದ್ದವರನ್ನು ದೂರದ ಗೋವಾ, ಮಣಿಪಾಲ, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಮತ್ತಿತರ ಕಡೆ ಸುಸಜ್ಜಿತ ಆಸ್ಪತ್ರೆಗೆ ಕರೆದೊಯ್ಯಬೇಕಾದ ಸ್ಥಿತಿ ಇದೆ. ಗಂಭೀರ ಪರಿಸ್ಥಿತಿಯಲ್ಲಿ ಇರುವವರು ದೂರದ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟ ನಿದರ್ಶನಗಳಿವೆ.   

ಶಾಸಕಿ ರೂಪಾಲಿ ಎಸ್‌. ನಾಯ್ಕ ಜಿಲ್ಲೆಯ ಜನತೆ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು
ಕಾರವಾರದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಒಟ್ಟಾರೆ ಜಿಲ್ಲೆಯ ಜನರ ಬಹು ಕಾಲದ ನನಸಾಗಿದ್ದ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ಕನಸು ನನಸಾಗುತ್ತಿದ್ದು, ಆದಷ್ಟು ಬೇಗ ಇದು ಕಾರ್ಯರೂಪಕ್ಕೆ ಬಂದು ಆರೋಗ್ಯ ಸಮಸ್ಯೆಗಳಿಗೆ ದೂರದ ನಗರಗಳಿಗೆ ಹೋಗುವ ಪ್ರಮೇಯ ತಪ್ಪುವಂತಾಗಲಿ ಎಂಬುದು ಸಾರ್ವಜನಿಕರ ಅಪೇಕ್ಷೆ.

ಶಾಸಕಿ ರೂಪಾಲಿ ಎಸ್‌.ನಾಯ್ಕ ನೀಡಿದ ಮನವಿ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು 8-02-2019ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ಸ್ಥಿತಿಗತಿ, ಮೂಲಭೂತ ಸೌಲಭ್ಯ, ಹೊಸದಾಗಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸುವ ಬಗ್ಗೆ ವರದಿ ನೀಡುವಂತೆ ಕೋರಿದ್ದರು.

ಜಿಲ್ಲಾಧಿಕಾರಿಯವರು 29-04-2019ರಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಶಾಸಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಲ್ಲಿ ವಿಚಾರಿಸಿದಾಗ ಸಮಿತಿ ರಚನೆ ಮಾಡಿ ವರದಿ ನೀಡುವುದಾಗಿ ತಿಳಿಸಿದ್ದರು. ನಂತರ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಅಗತ್ಯ ಇದೆ ಎಂದು ವರದಿ ನೀಡಿದ್ದರು.

 2019, ಜುಲೈ 31 ರಂದು ಶಾಸಕಿ ರೂಪಾಲಿ ನಾಯ್ಕ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್‌ ಮಂಜೂರು ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಮತ್ತೊಮ್ಮೆ ಮನವಿ ಮಾಡಿದರು. ಆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಈ ಬಗ್ಗೆ ಕಡತ ಮಂಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೂ ಶಾಸಕಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸಚಿವರು ಸಮ್ಮತಿ ಸೂಚಿಸಿದ್ದರು. ನಂತರ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕಾರವಾರ ಮೆಡಿಕಲ್‌ ಕಾಲೇಜು ನಿರ್ದೇಶಕರಿಗೆ ಪತ್ರ ಬರೆದು
ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಅವಶ್ಯಕತೆ ಹಾಗೂ ಬೇಕಾಗಿರುವ ಸೌಲಭ್ಯಗಳ ಕುರಿತು ಅಭಿಪ್ರಾಯ ನೀಡಲು ಕೇಳಿದ್ದರು. ನಿರ್ದೇಶಕರು ಸಹ ಆಸ್ಪತ್ರೆಯ ಅಗತ್ಯವಿದೆ ಎಂದು ವರದಿ ಸಲ್ಲಿಸಿದ್ದರು.

TRENDING