ದೇಶದಲ್ಲಿ ಕೊರೊನಾ ಹವಾಳಿ ಕಮ್ಮಿಯಾಗ್ತಿದ್ದಂತೆ, ಹಕ್ಕಿ ಜ್ವರದ ಭೀತಿ ಆರಂಭವಾಗಿದೆ. ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯ ಆತಂಕಕಾರಿ ಅಂಶವೊಂದನ್ನ ಹೊರ ಹಾಕಿದ್ದು, ದೇಶದ 6 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ.
ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಗುಜರಾತ್ʼಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು, ಈ ರೋಗವನ್ನು ಹತೋಟಿಗೆ ತರುವಂತೆ ಕೇಂದ್ರ ಸರ್ಕಾರ ಶುಕ್ರವಾರ ಸೂಚಿಸಿದೆ.
ಇನ್ನು ಹಕ್ಕಿಜ್ವರ (AI) ನಿಂದ ಬಾಧಿತರಾಗದ ರಾಜ್ಯಗಳು ಹಕ್ಕಿಗಳಲ್ಲಿ ಅಸಹಜ ಸಾವಿನ ಬಗ್ಗೆ ನಿಗಾ ವಹಿಸಬೇಕು. ತಕ್ಷಣ ಕೇಂದ್ರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ, ಆದ್ದರಿಂದ ಆದಷ್ಟು ಶೀಘ್ರಗತಿಯಲ್ಲಿ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ಅದು ತಿಳಿಸಿದೆ.
‘ಇದುವರೆಗೆ ಆರು ರಾಜ್ಯಗಳಲ್ಲಿ ಈ ರೋಗ ದೃಢಪಟ್ಟಿದ್ದು, ಕೇರಳದ ಎರಡೂ ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ. ಸೋಂಕು ನಿವಾರಣೆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದೆಹಲಿಯ ಹಸ್ಸಾಲ್ ಗ್ರಾಮದ ಡಿಡಿಎ ಪಾರ್ಕ್ ನಲ್ಲಿ 16 ಪಕ್ಷಿಗಳ ಸಾವಿನ ಪ್ರಕರಣ ವರದಿಯಾಗಿದ್ದು, ಅವುಗಳ ಮಾದರಿಗಳನ್ನ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.