Wednesday, January 27, 2021
Home ರಾಜಕೀಯ ಬಿಜೆಪಿ ಬೆಳೆಯಲು ದಳ ಕಾರಣ: ಬಸವರಾಜ ರಾಯರೆಡ್ಡಿ

ಇದೀಗ ಬಂದ ಸುದ್ದಿ

ಬಿಜೆಪಿ ಬೆಳೆಯಲು ದಳ ಕಾರಣ: ಬಸವರಾಜ ರಾಯರೆಡ್ಡಿ

 ಕೊಪ್ಪಳ: ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನತಾದಳ ಇತ್ತು. ನಾವೆಲ್ಲ ಕೆಲವರು ಕಾಂಗ್ರೆಸ್‌ಗೆ ಬಂದರೆ, ಇನ್ನು ಕೆಲವರು ಬಿಜೆಪಿಗೆ ಹೋದರು. ಹೀಗಾಗಿ ಜನತಾದಳ ಶಕ್ತಿ ಕಳೆದುಕೊಂಡಿತು. ಒಂದು ವೇಳೆ ಅದೇ ಜನತಾ ದಳ ಇಂದು ಇದ್ದಿದ್ದರೆ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿರಲಿಲ್ಲ. ಬಿಜೆಪಿ ಬೆಳೆಯಲು ದಳ ಕಾರಣ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬೇರೆ ಪಕ್ಷ ಶಕ್ತಿಯುತವಾಗಿದೆಯೋ ಅಲ್ಲಿ ಬಿಜೆಪಿ ಜೀರೋ ಇದೆ. ಪಂಜಾಬ್‌, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಕೈಗೆ ಪರ್ಯಾಯವಾಗಿ ವಿರೋಧ ಪಕ್ಷವಿದೆ. ಅಲ್ಲಿ ಬಿಜೆಪಿಗೆ ಶಕ್ತಿಯೇ ಇಲ್ಲ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣವೇ ಜನತಾ ದಳ. ಅದಕ್ಕೆ ನಾನೂ ಸೇರಿದಂತೆ ಹಲವರು ಕಾಂಗ್ರೆಸ್‌ಗೆ ಬಂದೆವು. ನಮಗೆ ಬರಬೇಕಾದ ಮತಗಳು ನಮ್ಮ ಹಿಂದೆ ಬರಲಿಲ್ಲ.

ದಳದ ಮತಗಳು ಪರ್ಯಾಯವಾಗಿ ಬಿಜೆಪಿಗೆ ಒಡೆದು ಹೋದವು. ಕಾಂಗ್ರೆಸ್‌ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಟ್ಟಾರೆ ಶೇ.38ರಷ್ಟು ಮತ ಬಂದಿವೆ. ಬಿಜೆಪಿಗೆ ಶೇ.36.2ರಷ್ಟು ಮತ ಬಂದಿವೆ. ಜೆಡಿಎಸ್‌ಗೆ ಶೇ.19 ಮತ ಬಂದಿವೆ. ಅಂದರೆ ಕಾಂಗ್ರೆಸ್‌ ಪರವಾಗಿ ಮತದಾರ ಇದ್ದಾರೆ. ನಮಗೆ ಸ್ಥಾನ ಕಡಿಮೆ ಬಂದಿರಬಹುದು. ಮತದಾರ ಕಾಂಗ್ರೆಸ್‌ ಪರವಿದ್ದಾನೆ ಎಂದರು.

ಸಿಎಂ ಇಬ್ರಾಹಿಂ ಹೋದ್ರೂ ಹಾನಿಯಿಲ್ಲ: ಜೆಡಿಎಸ್‌ಗೆ ಸಿಎಂ ಇಬ್ರಾಹಿಂ ಹೋದರೂ ಕಾಂಗ್ರೆಸ್‌ಗೆ ಯಾವುದೇ ಹಾನಿಯಾಗಲ್ಲ. ಜೆಡಿಎಸ್‌ ಏನೋ ಅಲ್ಪಸಂಖ್ಯಾತರ ಮತ ಪಡೆಯಲು ಯೋಚನೆ ಮಾಡಿರಬಹುದು. ಆದರೆ ಕಾಂಗ್ರೆಸ್‌ಗೆ ದೊಡ್ಡ ಇತಿಹಾಸ ಇದೆ. ಸಿಎಂ ಇಬ್ರಾಹಿಂ ಹಿಂದೆ ಭದ್ರಾವತಿ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಅವರ ಭಾಷಣ ಮನೊರಂಜನೆಯಾಗಿರುತ್ತೆ. ಆದರೆ ಜನ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಲ್ಲ.

ಅವರು ಒಳ್ಳೆಯ ಭಾಷಣ ಮಾಡಬಹುದು. ಆದರೆ ಮತ ಹಾಕಬೇಕಲ್ಲ. ಮುಸ್ಲಿಮರೂ ಅವರ ಪರ ಹೋಗಲ್ಲ. ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಪರವಿದೆ. ಬಿಜೆಪಿಯು ಮುಸ್ಲಿಂ ಸಮುದಾಯದ ಪರ ಇಲ್ಲ ಎನ್ನುವುದಕ್ಕೆ ಅವರು ನಮ್ಮ ಪರವಿದ್ದಾರೆ. ನಾವು ಎಲ್ಲ ಸಮಾಜದವರೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದರು.

ಲಾಭಕ್ಕಾಗಿ ದೇವೇಗೌಡರ ರಾಜಕಾರಣ: ದೇವೇಗೌಡರು ಲಾಭಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಒಮ್ಮೆ ಅವರ ಮಗ ಸಿಎಂ ಆಗಬೇಕು. ಇಲ್ಲವೇ ಯಾವ ಪಕ್ಷ ಅಧಿಕಾರದಲ್ಲಿರತ್ತೋ ಅವರ ಪರ ಇರ್ತಾರೆ. ಸೈದ್ಧಾಂತಿಕ ವಿಚಾರ ಇಲ್ಲದ ಪಕ್ಷವನ್ನು ಜನ ಬೆಂಬಲಿಸಲ್ಲ. ಬಿಜೆಪಿ ಆಟದಿಂದ ಜೆಡಿಎಸ್‌ ನಿರ್ನಾಮವಾಗಲಿದೆ. ಜೆಡಿಎಸ್‌ ಅಧಿಕಾರ ನೋಡಿ ರಾಜಕಾರಣ ಮಾಡುತ್ತಿದೆ. ಅವರಿಗೆ ಸೈದ್ಧಾಂತಿಕ ರಾಜಕಾರಣ ಮಾಡಲು ಆಗುತ್ತಿಲ್ಲ. ದೇವೇಗೌಡರ ಮಾತು ಕೇಳುವ ಪರಿಸ್ಥಿತಿ ಕುಮಾರಸ್ವಾಮಿಗಿಲ್ಲ. ಕುಮಾರಸ್ವಾಮಿಯನ್ನು ವಿರುದ್ಧ ಹಾಕಿಕೊಳ್ಳುವ ಶಕ್ತಿ ದೇವೇಗೌಡರಿಗೆ ಇಲ್ಲ. ವಯಸ್ಸಾದ ಮೇಲೆ ಮಕ್ಕಳು ತಂದೆ ಮಾತು ಕೇಳಲ್ಲ. ಮುಂದೆ ಜೆಡಿಎಸ್‌ಗೆ ಭವಿಷ್ಯವಿಲ್ಲ ಎಂದರು.

ರಾಜಕಾರಣ ತೀರಾ ಕೆಳಮಟ್ಟಕ್ಕೆ ಇಳಿದಿದೆ: ಇಂದು ಎಲ್ಲ ಪಕ್ಷಗಳ ರಾಜಕಾರಣ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಸೈದ್ಧಾಂತಿಕ ರಾಜಕಾರಣ ಮಾಡುತ್ತಿಲ್ಲ. ಬರೀ ಜಾತಿ, ಹಣದಲ್ಲೇ ರಾಜಕಾರಣ ನಡೆಯುತ್ತಿದೆ. ಬಿಜೆಪಿ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದೆ. ಬಿಎಸ್‌ವೈ 17 ಶಾಸಕರನ್ನು ರಾಜೀನಾಮೆ ಕೊಡಿಸಿ ಅವರಿಗೆ ಸಚಿವ ಸ್ಥಾನ ಕೊಡುವುದು ತಪ್ಪಲ್ವಾ? ಶಾಸ್ತ್ರ ಹೇಳುತ್ತಿರುವ ಬಿಜೆಪಿ ಅನಾಚಾರ ಮಾಡುತ್ತಿದೆ. ಕಾಂಗ್ರೆಸ್‌ 70 ವರ್ಷದಲ್ಲಿ ಅನಾಚಾರ ಮಾಡಿದರೆ ಬಿಜೆಪಿ ಈ 7 ವರ್ಷದಲ್ಲಿ ಮಾಡುತ್ತಿದೆ. ರಾಜಕಾರಣ ಎಂದರೆ ದಂಧೆ ಮಾಡುವುದಲ್ಲ. ಹಿಂದಿನ ರಾಜಕಾರಣದಂತೆ ನಾವು ಇರಲು ಆಗುತ್ತಿಲ್ಲ. ಜಾತಿ-ಹಣ-ಹೆಂಡದ ರಾಜಕಾರಣ ಇಂದು ನಡೆದಿದೆ. ಎಲ್ಲ ಪಕ್ಷಗಳ ನಾಯಕರು ಇಂದು ಇದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನೂ
ಹೊರತಾಗಿಲ್ಲ. ರಾಜಕೀಯ ನೈತಿಕತೆ ಕುಸಿದು ಹೋಗಿದೆ ಎಂದರು.

TRENDING