ಬೆಂಗಳೂರು(ಜ. 08): ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ಮತ್ತು ಸ್ವಿಗ್ಗಿ ಸಂಸ್ಥೆಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ಈ ವಾರ ದಾಳಿ ನಡೆದಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೆರಿಕದ ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ ಹಾಗೂ ಸ್ಥಳೀಯ ಫೂಡ್ ಆಯಪ್ ಸ್ವಿಗ್ಗಿಯ ಥರ್ಡ್ ಪಾರ್ಟಿ ವ್ಯವಹಾರಿಗಳು ತೆರಿಗೆ ವಂಚನೆ ಎಸಗಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಈ ದಾಳಿ ನಡೆಸಿರುವುದು ತಿಳಿದುಬಂದಿದೆ.
ಫ್ಲಿಪ್ಕಾರ್ಟ್ನ ಲಾಜಿಸ್ಟಿಕ್ಸ್ ಅಂಗವಾಗಿರುವ ಇನ್ಸ್ಟಾಕಾರ್ಟ್ ಸಂಸ್ಥೆಯ ಕಚೇರಿಯಲ್ಲಿ ನಿನ್ನೆ ರಾತ್ರಿಯವರೆಗೂ ಐಟಿ ಅಧಿಕಾರಿಗಳು ಶೋಧ ನಡೆಸಿದರು. ಸುಮಾರು 20 ಅಧಿಕಾರಿಗಳ ತಂಡ ಈ ಕಚೇರಿಗೆ ಭೇಟಿ ಕೊಟ್ಟು ಕಂಪನಿಯ ವೆಂಡರ್ಗಳಿಗೆ ನೀಡಲಾದ ಇನ್ವಾಯ್ಸ್ ಮೊದಲಾದ ಕಡತಗಳನ್ನ ಪರಿಶೀಲಿಸದರೆಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ತನ್ನ ಮೂಲವನ್ನ ಉಲ್ಲೇಖಿಸಿ ವರದಿ ಮಾಡಿದೆ. ಫ್ಲಿಪ್ಕಾರ್ಟ್ ಸಂಸ್ಥೆ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ತಮ್ಮ ಕಂಪನಿ ಎಲ್ಲಾ ರೀತಿಯ ತೆರಿಗೆ ಮತ್ತು ಕಾನೂನು ನಿಯಮಗಳಿಗೆ ಬದ್ಧವಾಗಿದೆ. ಐಟಿ ಅಧಿಕಾರಿಗಳಿಗೆ ಅಗತ್ಯವಿರುವ ಮಾಹಿತಿ ಒದಗಿಸಿ ಸಹಕರಿಸುತ್ತಿದ್ದೇವೆ ಎಂದು ಹೇಳಿದೆ.
ಇನ್ನು, ದಕ್ಷಿಣ ಆಫ್ರಿಕಾದ ನ್ಯಾಸ್ಪರ್ಸ್ ಎಂಬ ಕಂಪನಿಯ ಬಂಡವಾಳ ಹೊಂದಿರುವ ಸ್ವಿಗ್ಗಿ ಸಂಸ್ಥೆ ಕೂಡ ತಾನು ತೆರಿಗೆ ವಂಚನೆ ಮಾಡಿಲ್ಲ ಎಂದಿದೆ. ಈ ವೇಳೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಅಥವಾ ಹೇಳಿಕೆ ಬಂದಿಲ್ಲ.
ಬೆಂಗಳೂರು :ಫ್ಲಿಪ್ ಕಾರ್ಟ್, ಸ್ವಿಗ್ಗಿ ಕಚೇರಿಗಳ ಮೇಲೆ ಐಟಿ ದಾಳಿ
