Saturday, January 23, 2021
Home ಕೋವಿಡ್-19 ಹಾಸನದಲ್ಲಿ 10 ಶಿಕ್ಷಕರಿಗೆ ಕೊರೊನಾ: ಪೋಷಕರು, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ

ಇದೀಗ ಬಂದ ಸುದ್ದಿ

ಹಾಸನದಲ್ಲಿ 10 ಶಿಕ್ಷಕರಿಗೆ ಕೊರೊನಾ: ಪೋಷಕರು, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ

 ಹಾಸನ, ಜ 7: ಶಾಲೆಗಳು ಆರಂಭವಾಗುತ್ತಿದ್ದಂತೆಯೇ ಮಕ್ಕಳಿಗೆ ಕೊರೊನಾ ಮಹಾಮಾರಿ ವಕ್ಕರಿಸಿಬಿಡುತ್ತದೆಯೋ ಎಂದು ಪೋಷಕರು ಭಯದಲ್ಲಿ ದಿನ ಕಳೆಯುವ ಸಮಯದಲ್ಲಿಯೇ ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕವನ್ನುಂಟು ಮಾಡಿದೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 10 ಮಂದಿಗೆ ಈಗ ಕೊರೊನಾ ಸೋಂಕು ಹರಡಿರುವುದು ಬೆಳಕಿಗೆ ಬಂದಿದ್ದು, ಭಯದ ವಾತಾವರಣವನ್ನು ಸೃಷ್ಠಿ ಮಾಡಿದೆ. 10ನೇ ತರಗತಿ ಮಕ್ಕಳಿಗೆ ಇದು ಪ್ರಮುಖ ಘಟ್ಟವಾಗಿರುವುದರಿಂದ ಹೆಚ್ಚಿನ ಪೋಷಕರು ಮಕ್ಕಳನ್ನು ಮನಸ್ಸಲ್ಲದ ಮನಸ್ಸಿನಿಂದ ಶಾಲೆಗೆ ಕಳುಹಿಸುತ್ತಿದ್ದಾರೆ.

ಇದೀಗ ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರುವ ಕುರಿತಂತೆ ಹಾಸನ ಡಿಡಿಪಿಐ ಪ್ರಕಾಶ್ ಅವರು ಮಾಹಿತಿ ನೀಡಿದ್ದು, ಶಾಲೆ ಪ್ರಾರಂಭವಾದ ಬಳಿಕ ಶಿಕ್ಷಕರಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಬಗ್ಗೆ ದೃಢಪಡಿಸಿದೆ. ಪ್ರಾಥಮಿಕ ಶಾಲೆಯ 7 ಮಂದಿ ಮತ್ತು ಪ್ರೌಢ ಶಾಲೆಯ ಮೂರು ಮಂದಿ ಶಿಕ್ಷಕರಿಗೆ ಕೊರೊನಾ ತಗುಲಿರುವುದಾಗಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಶಾಲೆ ಆರಂಭಕ್ಕೂ ಮುನ್ನ ಮೂವರು ಶಿಕ್ಷಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು, ಹಾಗೂ ಅವರು ಶಾಲೆಗೆ ಹಾಜರಾಗಿರಲಿಲ್ಲ. ನಂತರ ಜನವರಿ 1ನೇ ತಾರೀಕಿನಿಂದ ಶಾಲೆಗಳನ್ನು ಆರಂಭಿಸಲಾಗಿದ್ದು, ಈ ನಡುವೆ 7 ಮಂದಿ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಪಿಯುಸಿ ವಿಭಾಗದಲ್ಲಿ ಯಾವುದೇ ಉಪನ್ಯಾಸಕರಿಗೆ ಕೊರೊನಾ ದೃಢಪಟ್ಟ ಬಗ್ಗೆ ವರದಿಯಾಗಿಲ್ಲ.

ಇನ್ನು ಶಿಕ್ಷಕರಿಗೆ ಸೋಂಕು ತಗಲಿರುವ ಹಿನ್ನೆಲೆಯಲ್ಲಿ 10 ಶಾಲೆಯ ಮಕ್ಕಳಿಗೆ ಮೂರು ದಿನ ರಜೆ ನೀಡಲಾಗಿದೆ. ಮುನ್ನೆಚ್ಚರಿಕೆಯಾಗಿ ಈ ಕ್ರಮಕೈಗೊಳ್ಳಲಾಗಿದ್ದು, ಮೂರು ದಿನದ ನಂತರ ವಿದ್ಯಾರ್ಥಿಗಳು ಶಾಲೆಗೆ ಬರುವ ಬಗ್ಗೆ ಮತ್ತೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಹಲವು ತಿಂಗಳ ನಂತರ ಶಾಲಾ ಕಾಲೇಜು ಆರಂಭವಾಗಿದ್ದು, ಇದೀಗ ಶಿಕ್ಷಕರಲ್ಲಿ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿರುವುದರಿಂದ ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿಯೂ ಭಯ ಶುರುವಾಗಿದೆ.

ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಇದುವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾಮಾಜಿಕ ಅಂತರ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಕೊರೊನಾ ಸೋಂಕು ಹರಡುವಿಕೆ ಇನ್ನೂ ಸಹ ನಿಂತಿಲ್ಲದಿರುವುದು ವಿದ್ಯಾರ್ಥಿಗಳು ಮಾತ್ರವಲ್ಲ, ಇದೀಗ ಶಿಕ್ಷಕರಲ್ಲಿಯೂ ಭಯವನ್ನುಂಟು ಮಾಡಿದೆ. ಹೀಗಾಗಿ ಮಾಸ್ಕ್, ಸ್ಯಾನಿಟೈಸ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವ ಬಗ್ಗೆ ವಿದ್ಯಾರ್ಥಿಗಳತ್ತ ಹೆಚ್ಚಿನ ಆಸ್ಥೆ ವಹಿಸುವುದು ಅಗತ್ಯವಾಗಿದೆ.

TRENDING