ಹೊಸದಿಲ್ಲಿ: ಕೆಲವು ಸ್ಥಳಗಳಲ್ಲಿ ವಲಸೆ ಹಾಗೂ ಕಾಡುಪಕ್ಷಿಗಳು ಹಕ್ಕಿಜ್ವರದಿಂದಾಗಿ ಸಾಯುತ್ತಿರುವ ವರದಿಗಳು ಬಂದಿವೆ. ತಿನ್ನುವ ಮೊದಲು ಮೊಟ್ಟೆಗಳನ್ನು ಹಾಗೂ ಮಾಂಸವನ್ನು ಸಂಪೂರ್ಣ ಬೇಯಿಸಿ. ಯಾರೂ ಚಿಂತಿಸಬೇಕಾಗಿಲ್ಲ. ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಹಾಗೂ ರಾಜ್ಯಗಳನ್ನು ಎಚ್ಚರಿಸಲಾಗಿದೆ ಎಂದು ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಡೈರಿ ಸಚಿವ ಗಿರಿರಾಜ್ ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಹಿಮಾಚಲಪ್ರದೇಶ, ಮಧ್ಯಪ್ರದೇಶ, ಕೇರಳ ಹಾಗೂ ರಾಜಸ್ಥಾನಗಳಲ್ಲಿ ಹಕ್ಕಿ ಜ್ವರ ಹರಡುವಿಕೆಯ ಸ್ಥಿತಿಗತಿ ವರದಿಗಳನ್ನು ಗಿರಿರಾಜ್ ಸಿಂಗ್ ಹಂಚಿಕೊಂಡಿದ್ದಾರೆ. ಅಲ್ಲಿ 12 ಕೇಂದ್ರ ಬಿಂದುಗಳನ್ನು ಗುರುತಿಸಲಾಗಿದೆ.
ಕಳೆದ 10 ದಿನಗಳಲ್ಲಿ ಭಾರತದಾದ್ಯಂತ ಲಕ್ಷಾಂತರ ಪಕ್ಷಿಗಳು ಸಾವನ್ನಪ್ಪಿವೆ. ಕೆಲವು ಪೀಡಿತ ರಾಜ್ಯಗಳು ಪಕ್ಷಿಗಳನ್ನು ಸಾಯಿಸಲು ಆರಂಭಿಸಿವೆ. ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಹಕ್ಕಿಜ್ವರ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಸಲಹೆಯನ್ನು ನೀಡಿದೆ ಹಾಗೂ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಹೊಸದಿಲ್ಲಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.