Wednesday, January 27, 2021
Home ಅಂತರ್ ರಾಷ್ಟ್ರೀಯ ಹಕ್ಕಿ ಜ್ವರ: ಹಿಮಾಚಲ ಪ್ರದೇಶದಲ್ಲಿ 2,403 ಪಕ್ಷಿಗಳ ಸಾವು

ಇದೀಗ ಬಂದ ಸುದ್ದಿ

ಹಕ್ಕಿ ಜ್ವರ: ಹಿಮಾಚಲ ಪ್ರದೇಶದಲ್ಲಿ 2,403 ಪಕ್ಷಿಗಳ ಸಾವು

ಶಿಮ್ಲಾ: ಉತ್ತರ ಭಾರತದಲ್ಲಿ ಹಕ್ಕಿಜ್ವರ ತೀವ್ರಗೊಂಡಿದ್ದು, ವಿವಿಧ ದೇಶಗಳಿಂದ ಹಿಮಾಚಲ ಪ್ರದೇಶಕ್ಕೆ ಬಂದಿದ್ದ ಸಾವಿರಾರು ವಲಸೆ ಪಕ್ಷಿಗಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿವೆ. ಅಂತೆಯೇ ಈ ಸಾವಿನ ಸಂಖ್ಯೆ ಮುಂದಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಿಮಾಚಲ ಪ್ರದೇಶ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮೂಲಗಳ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಹಕ್ಕಿಜ್ವರದಿಂದಾಗಿ ಈವರೆಗೆ 2,400 ಕ್ಕೂ ಹೆಚ್ಚು ಪಕ್ಷಿಗಳು ಸತ್ತಿದ್ದು, ಈ ಸಂಖ್ಯೆ ಮುಂದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಿಮಾಚಲ ಪ್ರದೇಶ ರಾಜ್ಯ ಅರಣ್ಯ ಸಚಿವ ರಾಕೇಶ್ ಪಥಾನಿಯಾ ತಿಳಿಸಿದ್ದಾರೆ.

‘ಇಲ್ಲಿಯವರೆಗೆ 2,403 ಪಕ್ಷಿಗಳು ಸಾವನ್ನಪ್ಪಿವೆ. ಈ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ನಾವು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದು, ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಪಾಂಗ್ ಅಣೆಕಟ್ಟು ಅಭಯಾರಣ್ಯ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಬಾರ್-ಹೆಡೆಡ್ ಗೂಸ್ ಜೊತೆಗೆ ನದಿ ಟರ್ನ್, ಬ್ರೌನ್-ಹೆಡ್ ಗಲ್, ಮತ್ತು ಕಾರ್ಮೊರಂಟ್ ಸೇರಿದಂತೆ ನೂರಾರು ಚಳಿಗಾಲದ ವಲಸೆ ಹಕ್ಕಿಗಳು ಸತ್ತಿವೆ ಎಂದು ಪಥಾನಿಯಾ ಹೇಳಿದ್ದಾರೆ.

ಡಿಸೆಂಬರ್ ಅಂತ್ಯದಲ್ಲಿ ಪಕ್ಷಿ ಸಾವುಗಳನ್ನು ಅರಣ್ಯ ಅಧಿಕಾರಿಗಳು ಮೊದಲು ಗಮನಿಸಿದ್ದರು ಮತ್ತು ನಾಗ್ರೋಟಾ-ಸೂರಿಯನ್ ವ್ಯಾಪ್ತಿಯ ಅರಣ್ಯ ಅಧಿಕಾರಿ ಡಿಸೆಂಬರ್ 31 ರಂದು ಬರೆದ ಪತ್ರದಲ್ಲಿ ನಾಗ್ರೋಟಾ-ಸೂರಿಯನ್ ವನ್ಯಜೀವಿ ಶ್ರೇಣಿಯ ಪಾಂಗ್ ಡ್ಯಾಮ್ ಸರೋವರ ಅಭಯಾರಣ್ಯದಲ್ಲಿ ಒಟ್ಟು 141 ಚಳಿಗಾಲದ ವಲಸೆ ಹಕ್ಕಿಗಳು ಮೃತಪಟ್ಟಿವೆ ಎಂದು ವರದಿ ಮಾಡಿದೆ. ಶ್ರೇಣಿಯ ಜವಾಲಿ ಬೀಟ್ ಪ್ರದೇಶದಲ್ಲಿ 29 ವಲಸೆ ಹಕ್ಕಿಗಳು ಸತ್ತಿದ್ದು. ಭಟೋಲಿ ಫಕೋರಿಯನ್ ಪ್ರದೇಶದಲ್ಲಿ 7 ಹೆಡೆಡ್ ಗೂಸ್ ಪಕ್ಷಿಗಳು ಮೃತಪಟ್ಟಿವೆ ಎಂದು ತಿಳಿಸಲಾಗಿದೆ. ಅಂತೆಯೇ ರಾಜ್ಯದ ವಿವಿಧ ಭಾಗಗಳಿಂದ ಕೋಳಿ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಪಕ್ಷಿ ಜ್ವರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜ್ಯದ ಕೃಷಿ ಸಚಿವ ವೀರೇಂದ್ರ ಕನ್ವರ್ ಹೇಳಿದ್ದಾರೆ.

‘119 ಕೋಳಿ ಮಾದರಿಗಳನ್ನು ಪರೀಕ್ಷೆಗಾಗಿ ಜಲಂಧರ್‌ನ ಲ್ಯಾಬ್‌ಗೆ ಕಳುಹಿಸಲಾಗಿದೆ. ನಾವು ಕೋಳಿ ಮಾದರಿಗಳನ್ನು ರಾಜ್ಯದ ವಿವಿಧ ಭಾಗಗಳಿಂದ ಸಂಗ್ರಹಿಸುತ್ತಿದ್ದೇವೆ. ಕಾಂಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದು, ಯಾವುದೇ ತಳಿ / ವಯಸ್ಸಿನ ಯಾವುದೇ ಕೋಳಿ / ಪಕ್ಷಿಗಳು / ಮೀನುಗಳು ಮತ್ತು ಅವುಗಳ ಸಂಬಂಧಿತ ಉತ್ಪನ್ನಗಳನ್ನು (ಮೊಟ್ಟೆ, ಮಾಂಸ, ಕೋಳಿ ಇತ್ಯಾದಿ) ಕಂಗ್ರಾದ ಫತೇಪುರ್, ಡೆಹ್ರಾ, ಜವಾಲಿ ಮತ್ತು ಇಂದೋರಾ ಪ್ರದೇಶಗಳಲ್ಲಿ ಮಾರಾಟ / ಖರೀದಿ / ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಕನ್ವಾರ್ ಹೇಳಿದರು.

ಹಿಮಾಚಲ ಪ್ರದೇಶದ ಹೊರತಾಗಿ ದೇಶದ ಇತರ ನಾಲ್ಕು ರಾಜ್ಯಗಳಲ್ಲಿಯೂ ಏವಿಯನ್ ಇನ್ ಫ್ಲೂಯೆಂಜಾ ಸೋಂಕು (ಹಕ್ಕಿ ಜ್ವರ) ಪತ್ತೆಯಾಗಿದೆ. ಕೇರಳ, ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಸೋಕು ಪತ್ತೆಯಾಗಿದೆ. ಕೇರಳದ ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಗಳ ಕೆಲವು ಭಾಗಗಳಲ್ಲಿ ವೈರಸ್ ಹರಡುವುದು ದೃಢಪಟ್ಟ ನಂತರ ಪಕ್ಷಿ ಜ್ವರವನ್ನು ಕೇರಳ ಸರ್ಕಾರ ರಾಜ್ಯ-ನಿರ್ದಿಷ್ಟ ವಿಪತ್ತು ಎಂದು ಘೋಷಿಸಿದೆ. ಹಕ್ಕಿ ಜ್ವರ ವರದಿಯಾದ ಪ್ರದೇಶದಲ್ಲಿ ಸುಮಾರು 12,000 ಬಾತುಕೋಳಿಗಳು ಸಾವನ್ನಪ್ಪಿವೆ ಮತ್ತು ಸುಮಾರು 40,000 ಪಕ್ಷಿಗಳನ್ನು ಕೊಲ್ಲಲಾಗುವುದು ಎಂದು ಕೇರಳ ಅರಣ್ಯ, ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಸಚಿವ ಕೆ.ರಾಜು ಖಚಿತಪಡಿಸಿದ್ದಾರೆ.

TRENDING