Tuesday, January 19, 2021
Home ಜಿಲ್ಲೆ ಕೋಲಾರ ದೆಹಲಿಯಲ್ಲಿನ ರೈತರ ಹೋರಾಟ ಅವೈಜ್ಞಾನಿಕ :ಬಿ.ಸಿ ಪಾಟೀಲ್

ಇದೀಗ ಬಂದ ಸುದ್ದಿ

ದೆಹಲಿಯಲ್ಲಿನ ರೈತರ ಹೋರಾಟ ಅವೈಜ್ಞಾನಿಕ :ಬಿ.ಸಿ ಪಾಟೀಲ್

 ಕೋಲಾರ, ಜ. 6: ಹೊಸ ಕೃಷಿ ಮಸೂದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಅವೈಜ್ಞಾನಿಕ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕೋಲಾರದಲ್ಲಿ ಹೇಳಿದರು.

ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನ ಬೇವಹಳ್ಳಿಯಲ್ಲಿ “ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಬಿ.ಸಿ ಪಾಟೀಲ್, ರೈತರ ಹೊಲದಲ್ಲಿ ರಾಗಿ ಚೆಲ್ಲಿ, ಆಲೂಗಡ್ಡೆ ಸಸಿ ನಾಟಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, 2008ನೇ ಇಸವಿಯಲ್ಲಿ ಪಂಜಾಬ್, ಹರಿಯಾಣ ರೈತರು ಎಪಿಎಂಸಿ ಮಾರುಕಟ್ಟೆ ಬೇಡವೆಂದು ಹೋರಾಟ ಮಾಡಿದರು. 2013 ರಲ್ಲಿ ಶರತ್ ಪವಾರ್ ನೇತೃತ್ವದ ಯುಪಿಎ ಸರ್ಕಾರ, 13 ರಾಜ್ಯಗಳ ಕೃಷಿ ಸಚಿವರ ಕಮಿಟಿ ಮಾಡಿದರು. 2014 ರಲ್ಲಿ 90 ಪುಟಗಳ ವರದಿ ನೀಡಿದೆ ಎಂದು ತಿಳಿಸಿದರು.

ರೈತರ ಮೇಲೆ ಶೋಷಣೆ ಆಗುತ್ತಿದ್ದು, ಶೇ.25 ಆದಾಯ ಬರುತ್ತಿದೆ, ಎಪಿಎಂಸಿ ರದ್ದು ಮಾಡಿ ಎಂದು ಹೋರಾಟ ಮಾಡಿದರು. ನಮ್ಮ ಸರ್ಕಾರ ಬಂದರೆ ಎಪಿಎಂಸಿ ಕಿತ್ತಾಕುತ್ತೇವೆ ಎಂದೂ ಹೇಳಿದ್ದರು ಎಂದು ಕಾಂಗ್ರೆಸ್ ವಿರುದ್ಧ ಕೃಷಿ ಸಚಿವರು ಕಿಡಿಕಾರಿದರು.

ನನ್ನ ಬೆಳೆ ನಾನು ಮಾರುತ್ತೇನೆ, ನೀನ್ಯಾರು ಕೇಳೋಕೆ ಅನ್ನುವ ಹಕ್ಕು ನಮ್ಮ ಸರ್ಕಾರ ಕೊಟ್ಟಿದೆ. ಕೇಂದ್ರ ಸರ್ಕಾರ ಅವರನ್ನು ಸಂಪರ್ಕ ಮಾಡಿದೆ, ಪ್ರತಿಭಟನೆ ಹಿಂಪಡೆಯುವುದು ಒಳ್ಳೆಯದು ಎಂದರು.

ಆದರೆ ಕೋಲಾರದ ರೈತರು ಮಾದರಿಯಾಗಿದ್ದಾರೆ. ಇಸ್ರೇಲ್ ಮಾದರಿಗಿಂತ, ಕೋಲಾರ ಕೃಷಿ ಮಾದರಿ ಉತ್ತಮವಾಗಿದೆ. ಬಜೆಟ್ ಬಗ್ಗೆ ಸಿಎಂ ಜೊತೆ ಚರ್ಚಿಸಿ ಹೊಸ ಪ್ಯಾಕೇಜ್ ಘೋಷಣೆ ಮಾಡುತ್ತೇವೆ ಎಂದು ಬಿ.ಸಿ ಪಾಟೀಲ್ ಭರವಸೆ ನೀಡಿದರು.

ನರೇಂದ್ರ ಮೋದಿ ಹಾಗೂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ರೈತರ ಪರವಾಗಿದೆ. ರೈತರು ತಮ್ಮ ಬೆಳೆಗೆ ತಾವೇ ವೈಜ್ಞಾನಿಕ ಬೆಲೆ ನಿಗದಿ ಮಾಡಬಹುದು. ನೇರವಾಗಿ ಗ್ರಾಹಕರಿಗೆ ತಲುಪಿ ಹೆಚ್ಚಿನ ಲಾಭ ಬರಲಿದೆ ಎಂದು ಹೇಳಿದರು.

ಸುಮ್ಮನೆ ಪ್ಯಾಕೇಜ್ ಕೊಡಿ, ವೈಜ್ಞಾನಿಕ ಬೆಲೆ ಕೊಡಿ ಅಂದರೆ ಆಗುವುದಿಲ್ಲ. ಆತ್ಮ ನಿರ್ಭರ ಭಾರತ ಅಡಿಯಲ್ಲಿ ಆಹಾರ ಸಂಸ್ಕರಣೆ ಘಟಕಕ್ಕೆ 10 ಸಾವಿರ ಕೋಟಿ ರುಪಾಯಿ ಮೀಸಲಿಟಿದ್ದಾರೆ. ಈ ಮೂಲಕ ರೈತನ ಬೆಳೆಗೆ ಉತ್ತಮ ಬೆಲೆ ಸಿಗಲಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

TRENDING