ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೇ ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಕೂಡ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ರಾಜಸ್ಥಾನದಲ್ಲಿ 250ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದ್ದು, ಅವುಗಳಿಗೆ ಹಕ್ಕಿ ಜ್ವರದ ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಕೇರಳದ ಅಲಪ್ಪುಳ, ಕೊಟ್ಟಾಯಂ ಜಿಲ್ಲೆಗಳಲ್ಲಿ ಕೂಡ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ, ಜಿಲ್ಲಾಡಳಿತಗಳು ಕಂಟ್ರೋಲ್ ರೂಂಗಳನ್ನು ಆರಂಭಿಸಿವೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ ಕೊನೆಯ ವಾರದಲ್ಲಿ ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಸಾಕಷ್ಟು ಬಾತುಕೋಳಿಗಳು ಸಾವನ್ನಪ್ಪಿದ್ದವು. ಅವುಗಳಲ್ಲಿ 8 ಬಾತುಕೋಳಿಗಳ ಸ್ಯಾಂಪಲ್ ಅನ್ನು ಭೂಪಾಲ್ನ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 5 ಸ್ಯಾಂಪಲ್ನಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದೆ. ನೀಂದೂರ್ನ ಬಾತುಕೋಳಿಯ ಫಾರ್ಮ್ ಒಂದರಲ್ಲೇ 1,500 ಬಾತುಕೋಳಿಗಳು ಸಾವನ್ನಪ್ಪಿವೆ. ಹಾಗೇ ಅಲಪ್ಪುಳ ಜಿಲ್ಲೆಯ ಕುಟ್ಟನಾಡ್ ಜಿಲ್ಲೆಯ ಕೆಲವು ಫಾರ್ಮ್ಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಕೇರಳದ ಫಾರ್ಮ್ಗಳಲ್ಲಿ 12,000 ಬಾತುಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಹರಡಬಾರದೆಂಬ ಕಾರಣಕ್ಕೆ ಅವುಗಳ ಜೊತೆಗಿದ್ದ ಸುಮಾರು 36,000 ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಬಾತುಕೋಳಿಗಳನ್ನು ಸಾಕಿದವರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ.
ಹಕ್ಕಿ ಜ್ವರ ಕೋಳಿ, ಟರ್ಕಿ, ಬಾತುಕೋಳಿ, ಕಾಗೆಗಳ ಮೂಲಕ ಹರಡುವ ಸಾಧ್ಯತೆ ಇರುತ್ತದೆ. ಕೇರಳದಲ್ಲಿ ಈ ಮೊದಲು 2016ರಲ್ಲಿ ಭಾರೀ ಪ್ರಮಾಣದ ಹಕ್ಕಿ ಜ್ವರದ ಕೇಸುಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಹಕ್ಕಿಜ್ವರದ ಭೀತಿ ಶುರುವಾಗಿದೆ.
ಕೇರಳಕ್ಕೂ ಕಾಲಿಟ್ಟ ಹಕ್ಕಿ ಜ್ವರ; 12 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳು ಸಾವು
