Saturday, January 23, 2021
Home ಸುದ್ದಿ ಜಾಲ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ: ಬಿ ಶ್ರೀರಾಮುಲು

ಇದೀಗ ಬಂದ ಸುದ್ದಿ

ಸಿದ್ದರಾಮಯ್ಯನವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ: ಬಿ ಶ್ರೀರಾಮುಲು

 ಬಾಗಲಕೋಟೆಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಕೆಪಿಸಿಸಿ ನಾಯಕತ್ವಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನೊಳಗೆ ಭಿನ್ನಾಭಿಪ್ರಾಯಗಳಿವೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ಅವರು ನಿನ್ನೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ತಮ್ಮನ್ನು ಮೂಲುಗುಂಪು ಮಾಡಬಹುದು ಎಂಬ ಭಯ ಸಿದ್ದರಾಮಯ್ಯನವರಿಗಿದೆ. ಇದಕ್ಕಾಗಿ ಹೇಗಾದರೂ ಮಾಡಿ ಶಿವಕುಮಾರ್ ಅವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬೇಕೆಂಬ ಹಪಾಹಪಿಯಲ್ಲಿ ಅವರಿದ್ದಾರೆ. ಶಿವಕುಮಾರ್ ಅವರು ತಮ್ಮ ಸ್ಥಾನವನ್ನು ಹೇಗೆ ಭದ್ರ ಮಾಡಿಕೊಳ್ಳುತ್ತಾರೆ ಎಂದು ನೋಡೋಣ ಎಂದು ಶ್ರೀರಾಮುಲು ಹೇಳಿದ್ದಾರೆ.

ತಾವು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಶ್ರೀರಾಮುಲು ಈ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯನವರು ಇನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಲು ಕನಸಿನಲ್ಲಿ ಕೂಡ ಸಾಧ್ಯವಿಲ್ಲ, ಅವರ ಪಕ್ಷದಲ್ಲಿಯೇ ಹಲವು ನಾಯಕರು ಅವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತಿಲ್ಲ ಎಂದು ಹೇಳಿದರು.

ನೀವು ಡಿಸಿಎಂ ಹುದ್ದೆಯನ್ನು ಅಪೇಕ್ಷಿಸುತ್ತೀರಾ ಎಂದು ಕೇಳಿದ್ದಕ್ಕೆ, ಇಲ್ಲ ನನಗೆ ಆಸೆಯಿಲ್ಲ, ಆದರೆ ರಾಜ್ಯದ ಜನತೆ ಬಯಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಈ ವದಂತಿಯನ್ನು ಹಬ್ಬಿಸಿದೆ, ಮುಂದಿನ ಎರಡೂವರೆ ವರ್ಷಗಳ ಕಾಲ ಬಿ ಎಸ್ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ, ಈ ಬಗ್ಗೆ ಪಕ್ಷದೊಳಗೆ ಸಹ ಯಾವುದೇ ಮಾತುಕತೆ, ಚರ್ಚೆ ನಡೆಯುತ್ತಿಲ್ಲ ಎಂದರು.

TRENDING