Wednesday, January 27, 2021
Home ಸುದ್ದಿ ಜಾಲ ಸೌರವ್ ಗಂಗೂಲಿಗೆ ಆಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಇದೀಗ ಬಂದ ಸುದ್ದಿ

ಸೌರವ್ ಗಂಗೂಲಿಗೆ ಆಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಆಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸೌರವ್ ಗಂಗೂಲಿ ಅವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ ಕಾರಣ ಅವರನ್ನ ಕೋಲ್ಕತ್ತಾದ ವುಡ್​ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಗೂಲಿ ಅವರಿಗೆ ಪ್ರಸ್ತುತ ಆಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವುಡ್‌ಲ್ಯಾಂಡ್‌ ಆಸ್ಪತ್ರೆಯ ವೈದ್ಯ ಡಾ. ಅಫ್ತಾಬ್‌ ಖಾನ್ ಅವರು, ‘ಸದ್ಯ ಗಂಗೂಲಿ ಅವರ ಆರೋಗ್ಯದ ಕುರಿತು 24 ಗಂಟೆಗಳ ಕಾಲ ನಿಗಾವಹಿಸುತ್ತಿದ್ದೇವೆ. ಅಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ಬಳಿಕ ಗಂಗೂಲಿ ಸಂಪೂರ್ಣ ಪ್ರಜ್ಞಾ ಸ್ಥಿತಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಅಗತ್ಯ ಬಿದ್ದರೆ ಮತ್ತೊಂದು ಶಸ್ತ್ರ ಚಿಕಿತ್ಸೆ
ಆಯಂಜಿಯೊಗ್ರಾಮ್‌ ವೇಳೆ ಅವರ ಹೃದಯದ ರಕ್ತನಾಳಗಳಲ್ಲಿ ಮೂರು ಕಡೆ ತಡೆಗಳು (ಬ್ಲಾಕ್‌ಗಳು) ಪತ್ತೆಯಾಗಿದ್ದವು. ಇದರಲ್ಲಿ ಒಂದು ಕಡೆ ರಕ್ತಚಲನೆ ಸುಗಮಗೊಳಿಸಲು ಸ್ಟಂಟ್‌ ಅಳವಡಿಸಲಾಗಿತ್ತು. ಅವರು ಯಾವುದೇ ಆರೋಗ್ಯ ತೊಂದರೆಯಿಲ್ಲದೇ ರಾತ್ರಿ ನಿದ್ದೆ ಮಾಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಈ ಬಗ್ಗೆ ಹೆಲ್ತ್ ಬುಲೆಟಿನ್ ಕೂಡ ಬಿಡುಗಡೆ ಮಾಡಿದ್ದು, ‘ಅವರ ಆರೋಗ್ಯಸ್ಥಿತಿ ನೋಡಿಕೊಂಡು ಇನ್ನೊಮ್ಮೆ ಆಯಂಜಿಯೊಪ್ಲಾಸ್ಟಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಪ್ರಮುಖ ರಕ್ತನಾಳಗಳಿಗೆ ಬಾಧೆಯಿರುವ ಕಾರಣ ಅವರಿಗೆ ಮತ್ತೊಂದು ಆಯಂಜಿಯೊಪ್ಲಾಸ್ಟಿ ಬೇಕಾಗಬಹುದು. ಆದರೆ ಇದು ಅವರ ದೇಹಸ್ಥಿತಿಯನ್ನು ಅವಲಂಬಿಸಿದೆ. ಈಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ. ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ಪ್ರಸ್ತುತ ಸಂಪೂರ್ಣವಾಗಿ ಪ್ರಜ್ಞೆ ಹೊಂದಿದ್ದಾರೆ. ಅವರ ಹೃದಯದಲ್ಲಿ ಎರಡು ಅಡೆತಡೆಗಳಿದ್ದು, ಅದಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಅಲ್ಲದೇ 48 ವರ್ಷದ ಗಂಗೂಲಿ ಅವರ ಕೊರೋನಾ ವರದಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಂಗೂಲಿ ಅವರು ಹೃದಯ ವಂಶಾವಳಿಯಿಂದ ವರ್ಗಾವಣೆಯಾಗಿರುವ ಹೃದಯ ಸಮಸ್ಯೆ ಹೊಂದಿದ್ದಾರೆ. ಅವರು ಶನಿವಾರ ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಗೆ ಬಂದಾಗ ಅವರ ನಾಡಿಮಿಡಿತ ನಿಮಿಷಕ್ಕೆ 70 ಬಾರಿ ಬಡಿಯುತ್ತಿತ್ತು. ಬಿಪಿ 130/80 ಎಂಎಂ ಹೆಚ್​ಡಿ ಇತ್ತು. ಇಸಿಜಿ ಪರೀಕ್ಷೆಯಲ್ಲಿ ಹೈಪರ್ ಅಕ್ಯೂಟ್ ಎಸ್​ಟಿ ವಿಭಾಗದಲ್ಲಿ ಏರುಪೇರಿರುವುದು ಪತ್ತೆಯಾಗಿದೆ. ಅವರ ದೇಹದಲ್ಲಿ ರಕ್ತ ಸಂಚಾರ ಸಾಧಾರಣವಾಗಿದೆ. ಅವರಿಗೆ ರಕ್ತದಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡುವ ಲಸಿಕೆ ಹಾಗೂ ಎರಡು ಬಾರಿ ಆಯಂಟಿ ಪ್ಲೇಟ್​ಲೇಟ್ಸ್​ ಡೋಸ್​ಗಳನ್ನು ನೀಡಲಾಗಿದೆ. ಅವರಿಗೆ ಪ್ರಾಥಮಿಕ ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಾಗ್ತಿದೆ ಎಂದು ವುಡ್​ಲ್ಯಾಂಡ್ಸ್ ಆಸ್ಪತ್ರೆಯ ಸಿಇಓ ಡಾ. ರೂಪಾಲಿ ಬಸು ಅವರು ಹೇಳಿಕೆ ನೀಡಿದ್ದಾರೆ.

ಶನಿವಾರ ಮುಂಜಾನೆ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಗಂಗೂಲಿಗೆ ಹೃದಯಬೇನೆ ಕಾಣಿಸಿಕೊಂಡು ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.

TRENDING