ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ ಶನಿವಾರ ಏಳು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಶನಿವಾರ 216 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದು ಜೂನ್ 1ರ ಸಾವಿನ ಸಂಖ್ಯೆಯ ಬಳಿಕ ದಾಖಲಾದ ಕನಿಷ್ಠ ಸಾವಿನ ಸಂಖ್ಯೆಯಾಗಿದೆ.
ಹೊಸ ಪ್ರಕರಣಗಳ ಸಂಖ್ಯೆ 18,153ಕ್ಕೆ ಇಳಿದಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಇದು ಸುಮಾರು ಒಂದು ಸಾವಿರದಷ್ಟು ಕಡಿಮೆ. ಶುಕ್ರವಾರ 8.3 ಲಕ್ಷ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಗುರುವಾರಕ್ಕೆ ಹೋಲಿಸಿದರೆ ಪರೀಕ್ಷಾ ಸಂಖ್ಯೆ 2.3ರಷ್ಟು ಕಡಿಮೆ ಆಗಿರುವುದೂ ಪ್ರಕರಣಗಳ ಇಳಿಕೆಗೆ ಕಾರಣ ಎನ್ನಲಾಗಿದೆ.
ಸೆ. 18ರಂದು ಇದುವರೆಗಿನ ಗರಿಷ್ಠ ಸಾವು ಸಂಭವಿಸಿದ್ದು, ಆ ದಿನ 1,244 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದರು. ಆ ಬಳಿಕ ಹೊಸ ಪ್ರಕರಣಗಳು ಹಾಗೂ ಸೋಂಕಿತರ ಸಾವಿನ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದೆ. ಶುಕ್ರವಾರ 224 ಮಂದಿ ಮೃತಪಟ್ಟಿದ್ದರು. ಜೂನ್ 2ರ ಬಳಿಕ ಮೊದಲ ಬಾರಿಗೆ ಸಾವಿನ ಸಂಖ್ಯೆ 250ಕ್ಕಿಂತ ಕಡಿಮೆಯಾಗಿತ್ತು. ಮಹಾರಾಷ್ಟ್ರದಲ್ಲಿ ಶನಿವಾರ ಗರಿಷ್ಠ (51) ಸಾವು ಸಂಭವಿಸಿದೆ. ಬಂಗಾಳ (28), ಕೇರಳ (21) ಮತ್ತು ಪಂಜಾಬ್ (15) ನಂತರದ ಸ್ಥಾನಗಳಲ್ಲಿವೆ.
ದೆಹಲಿಯಲ್ಲಿ ಶನಿವಾರವೂ ಸಾವಿನ ಸಂಖ್ಯೆ ಇಳಿಮುಖವಾಗಿದ್ದು, 14 ಸಾವು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಮೊದಲ ಪ್ರಕರಣ ವರದಿಯಾದ 300ನೇ ದಿನ ಇಡೀ ರಾಜ್ಯದಲ್ಲಿ ಹಾಗೂ ರಾಜಧಾನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇಳಿಕೆಯಾಗಿದೆ. ಶನಿವಾರ ರಾಜ್ಯದಲ್ಲಿ 3,218 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 19,38,854ಕ್ಕೇರಿದೆ. ಸಾವಿನ ಸಂಖ್ಯೆ 49,631 ಆಗಿದೆ.