ಬೆಂಗಳೂರು,ಜ.2- ಶಿವಮೊಗ್ಗದಲ್ಲಿ ನಡೆಯಲಿರುವ ಕೋರ್ಕಮಿಟಿ ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್ಸಿಂಗ್ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಮಹತ್ವದ ಮಾತುಕತೆ ನಡೆಸಿದ್ದಾರೆ. ಕುಮಾರಕೃಪ ಅತಿಥಿಗೃಹದಲ್ಲಿ ವಾಸ್ತವ್ಯಹೂಡಿದ್ದ ಅರುಣ್ ಸಿಂಗ್ ಜೊತೆ ಸಿಎಂ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಮತ್ತಿತರ ಪ್ರಮುಖ ನಾಯಕರು ಚರ್ಚೆ ನಡೆಸಿದರು.
ಕೆಲವೇ ಆಪ್ತ ನಾಯಕರಿಗೆ ಮಾತ್ರ ಅರುಣ್ ಸಿಂಗ್ ಅವರ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ಕೆಲವು ನಾಯಕರು ಅವರನ್ನು ಭೇಟಿಯಾಗುವ ಇಚ್ಛೆ ಹೊಂದಿದ್ದರಾದರೂ ಅವಕಾಶ ಸಿಗಲಿಲ್ಲ. ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಅರುಣ್ ಸಿಂಗ್ ಜೊತೆ ಬಿಎಸ್ವೈ, ಗೋವಿಂದ ಕಾರಜೋಳ ಅವರುಗಳು, ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ, ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ, ಪಕ್ಷದೊಳಗಿನ ಭಿನ್ನಮತ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಶಿರಾ, ಆರ್ಆರ್ನಗರ ಕ್ಷೇತ್ರಗಳ ಉಪಚುನಾವಣೆ ಹಾಗೂ ಗ್ರಾಪಂ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೆ ಅವಕಾಶ ಕಲ್ಪಿಸಬೇಕು, ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗುತ್ತಿದ್ದು, ಸಂಕ್ರಾಂತಿ ನಂತರ ಅವಕಾಶ ನೀಡಬೇಕೆಂದು ಅರುಣ್ ಸಿಂಗ್ ಬಳಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲವರು ಉದ್ದೇಶಪೂರ್ವಕವಾಗಿ ನಾಯಕತ್ವದ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಇನ್ನಷ್ಟು ಗೊಂದಲಗಳು ಸೃಷ್ಟಿಯಾಗತ್ತದೆ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ನಂತರ ಯಡಿಯೂರಪ್ಪ, ಅರುಣ್ ಸಿಂಗ್ ಒಂದೇ ಹೆಲಿಕಾಪ್ಟರ್ನಲ್ಲಿ ಶಿವಮೊಗ್ಗಕ್ಕೆ ತೆರಳಿದರು.