Tuesday, January 26, 2021
Home ರಾಜ್ಯ ರಾಜ್ಯದ 5 ಜಿಲ್ಲಾ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಡ್ರೈರನ್ ಯಶಸ್ವಿ

ಇದೀಗ ಬಂದ ಸುದ್ದಿ

ರಾಜ್ಯದ 5 ಜಿಲ್ಲಾ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಡ್ರೈರನ್ ಯಶಸ್ವಿ

ಬೆಂಗಳೂರು,ಜ.2- ಇನ್ನು ಒಂದು ವಾರದೊಳಗೆ ಕೋವಿಡ್-19 ಮಹಾಮಾರಿಗೆ ಲಸಿಕೆ ಲಭ್ಯವಾಗಲಿದೆ ಎಂಬ ಸಂತಸದ ನಡುವೆಯೇ ಇಂದು ರಾಜ್ಯದ ಐದು ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಅಣಕು ಕಾರ್ಯಾಚರಣೆ ಇಂದು (ಡ್ರೈರನ್) ವಿದುಕ್ತವಾಗಿ ಆರಂಭವಾಯಿತು. ಕೆಲವು ಸಣ್ಣಪುಟ್ಟ ಗೊಂದಲ, ಅಡ್ಡಿ ಆತಂಕದ ನಡುವೆಯೂ ರಾಜಧಾನಿ ಬೆಂಗಳೂರು, ಮೈಸೂರು, ಕಲಬುರಗಿ, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕೋವಿಡ್ ಡ್ರೈರನ್‍ಗೆ ಚಾಲನೆ ನೀಡಲಾಗಿದೆ.

ಬೆಂಗಳೂರಿನ ದಕ್ಷಿಣ ವಲಯದ ವಿದ್ಯಾಪೀಠ ಸಾರ್ವಜನಿಕ ಆರೋಗ್ಯ ಕೇಂದ್ರ, ಪಶ್ಚಿಮ ವಲಯದ ಕಾಮಾಕ್ಷಿಪಾಳ್ಯ ಆರೋಗ್ಯ ಕೇಂದ್ರ ಮತ್ತು ಆನೇಕಲ್‍ನ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೀಮು ಆರಂಭವಾಯಿತು. ಕಲಬುರಗಿ ಜಿಲ್ಲೆಯ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜೇವರ್ಗಿ ತಾಲ್ಲೂಕಿನ ಆಸ್ಪತ್ರೆ ಮತ್ತು ಔರಾದ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಾಲನೆ ನೀಡಲಾಯಿತು.

ಇದೇ ರೀತಿ ಶಿವಮೊಗ್ಗ ಜಿಲ್ಲೆಯ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಕೋವಿಡ್ ಡ್ರೈರನ್‍ಗೆ ಚಾಲನೆ ದೊರೆತಿದೆ. ಇಂದು ಮೈಸೂರಿನ ಜಯನಗರದ ಸಮುದಾಯ ಆರೋಗ್ಯ ಕೇಂದ್ರ, ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆ, ಹುಣಸೂರಿನ ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳಗಾವಿಯ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಡ್ರೈರನ್‍ಗೆ ಚಾಲನೆ ನೀಡಲಾಯಿತು. ಆಯಾ ಆರೋಗ್ಯ ಕೇಂದ್ರಗಳಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಸರ್ಜನ್‍ಗಳು ಸೇರಿದಂತೆ ಮತ್ತಿತರರು ಚಾಲನೆ ಕೊಟ್ಟರು.

ಮೊದಲ ಒಂದು ಗಂಟೆ ಅವಧಿಯಲ್ಲಿ ಒಂದಿಷ್ಟು ತಾಂತ್ರಿಕ ದೋಷಗಳು ಕಂಡುಬಂದವು. ಪ್ರತಿ ಕೇಂದ್ರದಲ್ಲಿ 25 ಜನರಿಗೆ ಹಾಗೂ ಪ್ರತಿ ಜಿಲ್ಲೆಯಲ್ಲಿ 75 ಮಂದಿಗೆ ಪೂರ್ವ ಅಭ್ಯಾಸ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೆ ಲಸಿಕೆ ಪಡೆದುಕೊಳ್ಳಲು 6,22,000 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇಂದು ನಡೆದ ಅಣಕು ಪ್ರದರ್ಶನದ ವೇಳೆ ಆರೋಗ್ಯ ಸಿಬ್ಬಂದಿ ಗೆ ಲಸಿಕೆ ನೀಡುವ ತಾಲೀಮು, ಲಸಿಕೆ ಬಗ್ಗೆ ಮಾಹಿತಿಗಳು ಸೇರಿದಂತೆ ವೈದ್ಯರು ಮತ್ತು ನಾಲ್ವರು ಸಿಬ್ಬಂದಿಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ವಾರಿಯರ್ಸ್‍ಗಳು ನೋಂದಣಿ ಸಮಯದಲ್ಲಿ ನೀಡಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ಬಳಿಕ ವಿಶ್ರಾಂತಿ ಕೊಠಡಿಗೆ ರವಾನಿಸಿ ಲಸಿಕೆ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ನೀಡಿ ವ್ಯಾಕ್ಸಿನ್ ಕೊಠಡಿಯಲ್ಲಿ ಲಸಿಕೆ ನೀಡುವ ತಾಲೀಮು ನಡೆಸಿ ನಿಗಾ ಘಟಕಕ್ಕೆ ಕರೆದೊಯ್ದು ಇಲ್ಲಿ 30 ನಿಮಿಷಗಳ ಕಾಲ ಇಡಲಾಯಿತು. ಈ ಪ್ರಕ್ರಿಯೆಗಳ ಬಗ್ಗೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ.

# ಹೇಗಿರಲಿದೆ ಲಸಿಕೆ ನೀಡುವ ಪ್ರಕ್ರಿಯೆ:
ಆರೋಗ್ಯ ಕೇಂದ್ರದಲ್ಲಿರುವ ಕೊರೊನಾ ವಾರಿಯರ್ಸ್‍ಗಳನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿತ್ತು. ಇಂದು ಮುಂಜನೆ ಹತ್ತು ಗಂಟೆಯಿಂದ ಹನ್ನೆರಡು ಗಂಟೆವರಗೆ ಮೂರು ಕೇಂದ್ರಗಳಲ್ಲಿ ಏಕಕಾಲಕ್ಕೆ ಡ್ರೈ ರನ್ ನಡೆಯಿತು. ಆಯ್ಕೆಯಾದ ಫಲಾನುಭವಿಗಳು ತಮ್ಮ ಹೆಸರು ನೋಂದಣಿ ಮಾಡುವಾಗ ಯಾವ ದಾಖಲಾತಿ ನೀಡಿದ್ದಾರೋ ಆ ದಾಖಲಾತಿಯನ್ನ ವ್ಯಾಕ್ಸಿನ್ ಪಡೆಯಲು ಬರುವಾಗ ತರಲು ಸೂಚಿಸಲಾಗಿತ್ತು. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನಚೀಟಿ ತರಲು ಸೂಚಿಸಲಾಗಿತ್ತು.

ಮೈಸೂರಿನಲ್ಲ ತಾಲೀಮು: ಕೇಂದ್ರ ಸರ್ಕಾರದ ಸೂಚನೆಯಂತೆ ನಗರದ ಜಯನಗರದ ಸಮುದಾಯ ಆರೋಗ್ಯ ಕೇಂದ್ರ, ಹುಣಸೂರು ತಾಲ್ಲೂಕಿನ ಬಿಳಿಕೆರೆ ಪ್ರಾಥಮಿಕ ಆರೋಗ್ಯ, ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಅಣಕು ಕಾರ್ಯ ನಡೆಸಲಾಯಿತು.

ಬೆಳಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಅಣಕು ಕಾರ್ಯ ನಡೆಯಿತು. ಲಸಿಕಾ ಕೇಂದ್ರದಲ್ಲಿ ಮೂರು ಕೊಠಡಿಗಳನ್ನು ಸಿದ್ದಪಡಿಸಲಾಗಿತ್ತು. ಅವುಗಳಲ್ಲಿ ಒಂದು ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿಯನ್ನು ಮಾಡಿ ಅವುಗಳಲ್ಲಿ ಐದು ಮಂದಿ ಲಸಿಕಾ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಲಸಿಕೆ ಪಡೆದವರು 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ವಿರಮಿಸಿದರು. ಜಯನಗರದ ಕೇಂದ್ರಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕೋವಿಡ್ ಲಸಿಕೆ ಅಣಕು ಕಾರ್ಯಕ್ಕೆ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗ ಮಾತನಾಡಿದ ಅವರು,

ಕೋವಿಡ್ ಲಸಿಕೆ ನೀಡಲು ಕೇಂದ್ರಗಳನ್ನು ಸಕಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ಪ್ರಯೋಗ ಮಾಡಲಾಗುವುದು. ಮೈಸೂರಿನಲ್ಲಿ 32 ಸಾವಿರ ಮಂದಿ ಕೊರೊನಾ ವಾರಿಯರ್ಸ್ ಇದ್ದಾರೆ.

 ಆದ್ಯತೆ ಮೇರೆಗೆ ಲಸಿಕೆ ನೀಡುವಂತೆ ಕೇಂದ್ರದಿಂದ ಸೂಚನೆ ಬಂದಿದೆ ಎಂದು ರೋಹಿಣಿ ಸಿಂಧೂರಿ ತಿಳಿಸಿದರು.

ಆರೋಗ್ಯ ಇಲಾಖೆ ಸಿಬ್ಬಂದಿಗೆ ಮೊದಲ ಲಸಿಕೆ ನೀಡಿ ನಂತರ ಸಾಧಕ-ಬಾಧಕ ನೋಡಿಕೊಂಡು ಸಾರ್ವಜನಿಕರಿಗೆ ಹಾಕಲಾಗುವುದು ಎಂದು ಹೇಳಿದರು. ಇಂದು 25 ಮಂದಿಗೆ ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡುವ ತಾಲೀಮು ನಡೆಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರ್‍ನಾಥ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

TRENDING