Tuesday, January 26, 2021
Home ಅಂತರ್ ರಾಜ್ಯ ಬಿಹಾರ ಸಿಎಂ ನಿತೀಶ್‌ ಗಿಂತಲೂ ಅವರ ಮಗನೇ ಐದು ಪಟ್ಟು ಹೆಚ್ಚು ಶ್ರೀಮಂತ!

ಇದೀಗ ಬಂದ ಸುದ್ದಿ

ಬಿಹಾರ ಸಿಎಂ ನಿತೀಶ್‌ ಗಿಂತಲೂ ಅವರ ಮಗನೇ ಐದು ಪಟ್ಟು ಹೆಚ್ಚು ಶ್ರೀಮಂತ!

 ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗಿಂತ ಅವರ ಮಗ ನಿಶಾಂತ್ ಐದು ಪಟ್ಟು ಹೆಚ್ಚು ಶ್ರೀಮಂತ.

ಎಂಜಿನಿಯರಿಂಗ್ ಪದವೀಧರನಾಗಿರುವ ನಿಶಾಂತ್ ₹3.62 ಕೋಟಿ ಮೌಲ್ಯದ ಸ್ವತ್ತುಗಳನ್ನು ಹೊಂದಿದ್ದರೆ, ನಿತೀಶ್ ಅವರು ₹56.5 ಲಕ್ಷ ಮೌಲ್ಯದ ಸ್ವತ್ತುಗಳ ಒಡೆಯರಾಗಿದ್ದಾರೆ. ಇವರು 1989ರ ಡಿಸೆಂಬರ್‌ನಿಂದಲೂ ಕೇಂದ್ರ ಸಚಿವ ಅಥವಾ ಮುಖ್ಯಮಂತ್ರಿಯಾಗಿದ್ದಾರೆ (1990-98ರ ಅವಧಿ ಬಿಟ್ಟು).

ನಿತೀಶ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಡಿಸೆಂಬರ್ 31ರಂದು ಅವರ ಸ್ವತ್ತುಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. 2010ರಿಂದ ನಿತೀಶ್ ಅವರು ಸ್ವತ್ತುಗಳ ವಿವರ ಬಹಿರಂಗಪಡಿಸುವ ವಿಧಾನ ಅನುಸರಿಸಿಕೊಂಡು ಬಂದಿದ್ದಾರೆ.

 ಬಿಹಾರ ಮುಖ್ಯಮಂತ್ರಿಯವರ ಬಳಿ ಇರುವ ಚರಾಸ್ತಿ ₹16.53 ಲಕ್ಷ ಆಗಿದ್ದರೆ,

ಸ್ಥಿರಾಸ್ತಿ (ದೆಹಲಿಯ ದ್ವಾರಕಾದಲ್ಲಿರುವ ಫ್ಲ್ಯಾಟ್) ₹40 ಲಕ್ಷ ಮೌಲ್ಯದ್ದಾಗಿದೆ. ಫೋರ್ಡ್‌ ವಾಹನ ಹಾಗೂ 12 ದನಗಳು ಅವರ ಒಡೆತನದಲ್ಲಿವೆ.

ಅವರ ಒಬ್ಬನೇ ಪುತ್ರನಾಗಿರುವ, ಉದ್ಯಮಿ ನಿಶಾಂತ್ ಬಳಿ ₹1.57 ಕೋಟಿ ಮೌಲ್ಯದ ಚರಾಸ್ತಿಯಿದೆ. ₹1.48 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. 2016ರ ಮಾದರಿಯ ಕಾರು, ₹20 ಲಕ್ಷ ಮೌಲ್ಯದ ಆಭರಣ ಹೊಂದಿದ್ದಾರೆ. ನಿಶಾಂತ್ ಹೆಚ್ಚಿನ ಆಸ್ತಿ ದಶಕದ ಹಿಂದೆ ಮೃತಪಟ್ಟಿದ್ದ ಅವರ ತಾಯಿ, ಶಿಕ್ಷಕಿಯಾಗಿದ್ದ ಮಂಜು ಸಿನ್ಹಾ ಅವರಿಂದ ಬಂದಿರುವುದಾಗಿದೆ.

ನಿತೀಶ್ ಅವರ ಸಂಪುಟ ಸಹೋದ್ಯೋಗಿ, ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಕೇಶ್ ಸಾಹ್ನಿ ಅವರು ₹12.34 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಶ್ರೀಮಂತ ಸಚಿವರಾಗಿದ್ದಾರೆ. ಇವರು ಸದ್ಯ ನಿತೀಶ್ ಸಂಪುಟದಲ್ಲಿ ಪಶುಸಂಗೋಪನಾ ಸಚಿವರಾಗಿದ್ದಾರೆ.

ನಿತೀಶ್ ಸಂಪುಟದಲ್ಲಿ ಅತಿ ಕಡಿಮೆ ಆಸ್ತಿ ಹೊಂದಿರುವ ಸಚಿವರೆಂದರೆ ರಾಮ್ ಪ್ರೀತ್ ಪಾಸ್ವಾನ್. ಇವರು ಹೊಂದಿರುವ ಆಸ್ತಿ ಮೌಲ್ಯ ₹95 ಲಕ್ಷ.

TRENDING