ವೇಣೂರು: ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ರಾಜ್ಯ ಹೆದ್ದಾರಿಯ ಕೆದ್ದು ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದ ರಿಕ್ಷಾ ಮತ್ತು ಓಮ್ನಿ ಕಾರು ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿ ಅವರ ಪತ್ನಿ ಸಹಿತ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಿಲ್ಯ ಗ್ರಾಮದ ನಡಿಮಾರು ಮನೆ ನಿವಾಸಿ, ಪಶು ಆಸ್ಪತ್ರೆಯ ನಿವೃತ್ತ ಕಂಪೌಂಡರ್ ಭುಜಬಲಿ ಜೈನ್ (60) ಸಾವನ್ನಪ್ಪಿದ ದುರ್ದೈವಿ.
ಭುಜಬಲಿ ಜೈನ್ ಅವರ ಪತ್ನಿ ಲಲಿತಾ, ರಿಕ್ಷಾ ಚಾಲಕ ಶಶಿಧರ, ಓಮ್ನಿ ಚಾಲಕ ಶಿವಮೊಗ್ಗದ ನಾಗಭೂಷಣ್ ಅವರಿಗೂ ತೀವ್ರ ತರಹದ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಭುಜಬಲಿ ಜೈನ್ ಅವರು ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಪತ್ನಿ ಹಾಗೂ ಪುತ್ರನ ಜತೆ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದಾಗ ಕೆದ್ದು ಬಳಿ ಎದುರಿನಿಂದ ಬಂದ ಓಮ್ನಿ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ರಿಕ್ಷಾದಲ್ಲಿದ್ದ ಅಭಿಜಿತ್ ಹಾಗೂ ಓಮ್ನಿಯಲ್ಲಿದ್ದ ಉಷಾ ಅವರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿದ್ದಾರೆ.