ಮಿಡ್ನಾಪುರ: ಇತ್ತೀಚಿಗೆ ಕಾಂಟೈ ಪುರಸಭೆ ಆಡಳಿತಾಧಿಕಾರಿ ಹುದ್ದೆಯಿಂದ ವಜಾಗೊಳಿಸಲಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಸಹೋದರ ಸೌಮೇಂದು ಸೇರಿದಂತೆ ಇನ್ನಿತರ ಟಿಎಂಸಿ ಪಕ್ಷದ ಹಲವು ಸದಸ್ಯರು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಶುಕ್ರವಾರ ಹೇಳಿದ್ದಾರೆ.
ಪುರ್ಬಾದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, ಶೀಘ್ರದಲ್ಲಿಯೇ ಟಿಎಂಸಿ ಛಿದ್ರಗೊಳ್ಳಲಿದ್ದು, ಕೆಲವು ಪುರಸಭೆ ಸದಸ್ಯರೊಂದಿಗೆ ಸೌಮೇಂದು ಹಾಗೂ 5 ಸಾವಿರ ಟಿಎಂಸಿ ಕಾರ್ಯಕರ್ತರು ಕೇಸರಿ ಪಕ್ಷವನ್ನು ಸೇರಲಿದ್ದಾರೆ ಎಂದರು.
ಕಮಲ ಪ್ರತಿಯೊಂದು ಮನೆಯಲ್ಲಿಯೂ ಅರಳುತ್ತಿದ್ದು, ತಮ್ಮ ಸಹೋದರ ಕೈಗೊಂಡ ಹೆಜ್ಜೆಯಂತೆ ಬಿಜೆಪಿ ಸೇರುತ್ತಿರುವುದಾಗಿ ಸೌಮೇಂದು ಗುರುವಾರ ಹೇಳಿಕೆ ನೀಡಿದ್ದರು. ಅಧಿಕಾರಿ ಮನೆಯಲ್ಲಿ ಇತರ ಇಬ್ಬರು ಸದಸ್ಯರು ಟಿಎಂಸಿ ಕ್ಯಾಂಪ್ ನಲ್ಲಿದ್ದಾರೆ.