ನವದೆಹಲಿ (ಡಿ. 31): ಸಿರಿಯಾದಲ್ಲಿ ಸೈನಿಕರಿದ್ದ ಬಸ್ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿರುವ ಘಟನೆ ಬುಧವಾರ ನಡೆದಿದೆ. ಈ ದುರಂತದಲ್ಲಿ 37 ಸೈನಿಕರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. Syriaದಲ್ಲಿ ನಡೆದ ಉಗ್ರ ದಾಳಿಗಳಲ್ಲಿ ಅತ್ಯಂತ ಭಯಾನಕ ದಾಳಿಗಳಲ್ಲಿ ಇದೂ ಒಂದಾಗಿದೆ ಎನ್ನಲಾಗಿದೆ. ಹೆದ್ದಾರಿಯಲ್ಲಿ ಸೈನಿಕರನ್ನು ಹೊತ್ತು ಸಾಗುತ್ತಿದ್ದ ಬಸ್ನ ಮೇಲೆ ನಿನ್ನೆ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ.
ವರ್ಷಾಂತ್ಯದ ರಜೆ ಮುಗಿಸಿ ಮತ್ತೆ ತಮ್ಮ ಸೇನಾ ನೆಲೆಗಳಿಗೆ ಮರಳುತ್ತಿದ್ದ ಸಿರಿಯಾದ ಸೈನಿಕರು ಬಾಂಬ್ ದಾಳಿಯಿಂದ ಛಿದ್ರವಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸಿರಿಯಾದ 37 ಸೈನಿಕರು ಮೃತಪಟ್ಟಿದ್ದಾರೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಿರಿಯಾದ ಮರುಭೂಮಿಯಲ್ಲಿದ್ದ ಅಡಗುತಾಣಗಳಲ್ಲಿ ಅಡಗಿದ್ದ ಐಸಿಸ್ ಉಗ್ರರು ಇದ್ದಕ್ಕಿದ್ದಂತೆ ಬಸ್ ಮೇಲೆ ಬಾಂಬ್ ಎಸೆದಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲೂ ಸಿರಿಯಾದಲ್ಲಿ ಉಗ್ರರು ಇದೇ ರೀತಿಯ ದಾಳಿ ನಡೆಸಿದ್ದರು. ಈ ಬಾರಿ ರಜೆಗೆ ಊರಿಗೆ ತೆರಳಿದ್ದ ಸೈನಿಕರನ್ನೇ ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿದ್ದಾರೆ. ಶುಲ ಎಂಬ ಗ್ರಾಮದ ಬಳಿ ಜಿಹಾದಿಸ್ಟ್ಗಳು ಸೇನಾ ಬಸ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ಈ ದುರ್ಘಟನೆಯಲ್ಲಿ 8 ಸೇನಾಧಿಕಾರಿಗಳು ಸೇರಿದಂತೆ 37 ಸೈನಿಕರು ಸಾವನ್ನಪ್ಪಿದ್ದಾರೆ.
ಬಾಂಬ್ ದಾಳಿಗೆ ಒಳಗಾದ ಬಸ್ನ ಹಿಂಭಾಗದಲ್ಲಿ ಬರುತ್ತಿದ್ದ ಇನ್ನೆರಡು ಸೇನಾ ಬಸ್ಗಳು ಈ ವೇಳೆ ಬಚಾವಾಗಿವೆ. ಎದುರಿನ ಬಸ್ ಸ್ಫೋಟಗೊಳ್ಳುತ್ತಿದ್ದಂತೆ ಬಸ್ ನಿಲ್ಲಿಸಿದ ಪರಿಣಾಮ ಉಳಿದೆರಡು ಬಸ್ಗಳಲ್ಲಿದ್ದವರಿಗೆ ಏನೂ ಅಪಾಯಗಳಾಗಿಲ್ಲ.