ಬೆಂಗಳೂರು: ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಫಲಿತಾಂಶದ ಸಂಪೂರ್ಣ ಚಿತ್ರಣ ಇನ್ನೇನು ಕೆಲವೇ ಗಂಟೆಗಳಲ್ಲಿ ಸಿಗಲಿದೆ.
ಮೂರು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಸದ್ಯ ಅರ್ಧಕ್ಕಿಂತ ಹೆಚ್ಚು ಫಲಿತಾಂಶಗಳು ಪ್ರಕಟಗೊಂಡಿವೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ರಾತ್ರಿಯ ವೇಳೆಗೆ ಸಂಪೂರ್ಣ ಚಿತ್ರಣ ಸಿಗಲಿದೆ.
ಇದುವರೆಗೆ ಸಿಕ್ಕಿರುವ ಫಲಿತಾಂಶದ ಪೈಕಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಎರಡನೆಯ ಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಮೂರನೇ ಸ್ಥಾನದಲ್ಲಿ ಜೆಡಿಎಸ್ ಇರುವುದಾಗಿ ತಿಳಿದುಬಂದಿದೆ.
ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿರುವ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ. 82616 ವಾರ್ಡ್ಗಳ ಪೈಕಿ ಬಿಜೆಪಿ ಬೆಂಬಲಿತರು ಭರ್ಜರಿ ಮುನ್ನಡೆ ಸಾಧಿಸಿದ್ದು, ಇದಾಗಲೇ 5344 ವಾರ್ಡ್ಗಳಲ್ಲಿ ಜಯಭೇರಿ ಬಾರಿಸಿರುವುದಾಗಿ ತಿಳಿಸಿದ್ದಾರೆ. ಇವರಿಗೆಲ್ಲಾ ತಮ್ಮ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಕರೊನಾ ವೈರಸ್ ಹಿನ್ನೆಲೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಆಗಿರುವ ಕಾರಣ, ಸ್ವಲ್ಪ ನಿಧಾನವಾಗಿ ಮತ ಎಣಿಕೆ ನಡೆಯುತ್ತಿದ್ದು, ರಾತ್ರಿಯ ವೇಳೆಗೆ ಸಂಪೂರ್ಣ ಚಿತ್ರಣ ಸಿಗಲಿದೆ.