Tuesday, January 26, 2021
Home ಸುದ್ದಿ ಜಾಲ ಬಾಲಿವುಡ್ ನಟ ಸೋನು ಸೂದ್ ಗೆ 2020 ರ ಜನೋಪಕಾರಿ ಪ್ರಶಸ್ತಿ

ಇದೀಗ ಬಂದ ಸುದ್ದಿ

ಬಾಲಿವುಡ್ ನಟ ಸೋನು ಸೂದ್ ಗೆ 2020 ರ ಜನೋಪಕಾರಿ ಪ್ರಶಸ್ತಿ

ಮುಂಬೈ: ಇತ್ತೀಚಿನ ದಿನಗಳಲ್ಲಿ ಹಲವಾರು ಸಾಮಾಜಿಕ ಸೇವೆಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಜನೋಪಕಾರಿ 2020 ಪ್ರಶಸ್ತಿಯ ಗರಿ ದೊರಕಿದೆ.

ನಾರ್ವೆಯಲ್ಲಿ ನಡೆಯಲಿರುವ ಪ್ರತಿಷ್ಠಿತ ಸ್ಕ್ಯಾಂಡೀವಿಯನ್ ಬಾಲಿವುಡ್ ಫೆಸ್ಟಿವಲ್ ನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮ ವರ್ಚುವಲ್ ವೇದಿಕೆಯ ಮೂಲಕ ನಡೆಯಲಿದೆ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಬಾಲಿವುಡ್ ಫೆಸ್ಟಿವಲ್ ನಾರ್ವೆ ಯ ಡೈರೆಕ್ಟರ್ ನಸ್ರುಲ್ಲಾ ಖುರೇಷಿ ನಾವು ಸಮಾಜದ ಅತೀ ಸಂಕಷ್ಟದ ಸಮಯದಲ್ಲಿ ನಟ ಸೋನು ಸೂದ್ ಅವರು ಯಾವ ರೀತಿ ಮಾನವೀಯತೆಯನ್ನು ಮೆರೆದಿದ್ದಾರೆ ಎಂಬುದನ್ನು ಗಮನಿಸಿದ್ದೇವೆ. ಹಾಗೂ ಅವರ ಸಮಾಜಮುಖಿ ಕಾರ್ಯಗಳಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದಿದ್ದಾರೆ.

ಕೋವಿಡ್ ಆರಂಭಗೊಂಡ ನಂತರ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ಹಲವಾರು ಜನರ ಬದುಕು ಬೀದಿಗೆ ಬಿದ್ದಿತ್ತು , ಸಾವಿರಾರು ಜನರು ಕೆಲಸವಿಲ್ಲದೆ, ಹಣವಿಲ್ಲದೆ ತಮ್ಮ ತಮ್ಮ ಊರುಗಳಿಗೆ ಹೋಗಲೂ ಆಗದೆ ಒದ್ದಾಡುವಂತಾಗಿತ್ತು . ಆ ಸಂದರ್ಭದಲ್ಲಿ ನಟ ಸೋನು ಸೂದ್ ತಮ್ಮ ಸ್ವಂತ ಖರ್ಚಿನಲ್ಲಿ ಹಲವಾರು ಜನರು ತಮ್ಮ ತಮ್ಮ ಊರುಗಳಿಗೆ ತಲುಪಲು ಸಾರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆ ಮೂಲಕ ಸಮಾಜದ ರಿಯಲ್ ಹೀರೋ ಆಗಿ ಕಾಣಿಸಿಕೊಂಡಿದ್ದರು.

ಇವರ ಈ ಸಾಮಾಜಿಕ ಸೇವೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒಳಗೊಂಡಂತೆ ಹಲವು ರಾಜಕೀಯ ನಾಯಕರು ಮತ್ತು ಸಮಾಜ ಸೇವಾ ಸಂಸ್ಥೆಗಳಿಂದ ಪ್ರಶಂಸೆ ವ್ಯಕ್ತವಾಗಿತ್ತು.

 ಈ ಹಿಂದೆ ನಟ ಸೋನು ಸೂದ್ 2020ರ ಏಷ್ಯಿಯನ್ ಸೆಲೆಬ್ರಿಟಿ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿರುವುರೊಂದಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು.

TRENDING