ನವದೆಹಲಿ: ಭಾರತದ ಸ್ವಾಭಿಮಾನಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ, ಈ ವಿಚಾರದಲ್ಲಿ ಯಾವತ್ತಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಎಎನ್ಐ (ಏಷ್ಯನ್ ನ್ಯೂಸ್ ಇಂಟರ್ ನ್ಯಾಷನಲ್) ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವುದನ್ನೂ ಭಾರತ ಸಹಿಸುವುದಿಲ್ಲ. ಮೃದುವಾಗಿದ್ದೇವೆ ಅಂದರೆ ಯಾರೂ ಕೂಡಾ ನಮ್ಮ ಸ್ವಾಭಿಮಾನದ ಮೇಲೆ ಆಕ್ರಮಣ ಮಾಡಬಹುದು ಅಂತಲ್ಲ ಎಂದಿದ್ದಾರೆ.
ಪಾಕಿಸ್ತಾನ್ ಅಸ್ತಿತ್ವಕ್ಕೆ ಬಂದಾಗಲಿಂದಲೂ ಗಡಿಯಲ್ಲಿ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ. ನಮ್ಮ ಸೈನಿಕರು ದೇಶದೊಳಗೆ ಮಾತ್ರವಲ್ಲ ಅಗತ್ಯಬಿದ್ದಲ್ಲಿ ಗಡಿ ಆಚೆಗಿನ ಭಯೋತ್ಪಾದಕ ಅಡುಗು ತಾಣಗಳ ಮೇಲೆ ದಾಳಿ ನಡೆಸಿ ಭಯೋತ್ಪಾದಕರನ್ನು ಮಟ್ಟಹಾಕಬಲ್ಲರು ಎಂಬುದನ್ನು ಭಾರತ ಈಗಾಗಲೇ ಸಾಬೀತು ಮಾಡಿದೆ. ನಮಗೆ ಅಂತಹ ಸಾಮರ್ಥ್ಯವಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಜೊತೆಗೆ ನಮ್ಮ ಸೈನಿಕರಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ ಎಂದು ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.