Sunday, January 24, 2021
Home ರಾಜ್ಯ ರೂಪಾಂತರ ವೈರಸ್ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟ ಸಚಿವ ಸುಧಾಕರ್

ಇದೀಗ ಬಂದ ಸುದ್ದಿ

ರೂಪಾಂತರ ವೈರಸ್ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟ ಸಚಿವ ಸುಧಾಕರ್

ಬೆಂಗಳೂರು,ಡಿ.30-ಬ್ರಿಟನ್‍ನ ರೂಪಾಂತರಗೊಂಡ ಹೊಸ ಮಾದರಿಯ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿರುವುದರಿಂದ ಪ್ರತಿಯೊಬ್ಬರು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಮನವಿ ಮಾಡಿರುವ ಸಚಿವ ಸುಧಾಕರ್, ಮತ್ತೆ ನೈಟ್ ಕಫ್ರ್ಯೂ ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಈವರೆಗೂ ಬ್ರಿಟನ್ ಮಾದರಿಯ 7 ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಹಾಗೂ ಶಿವಮೊಗ್ಗದಲ್ಲಿ 4 ಮಂದಿಗೆ ಈ ಸೋಂಕು ಕಾಣಿಸಿಕೊಂಡಿದೆ. ಈ ಸೋಂಕು ಶೇ.70ರಷ್ಟು ಹಬ್ಬುವ ಸಾಧ್ಯತೆ ಇರುವುದರಿಂದ ನಿಯಂತ್ರಣ ಮಾಡಲು ಮಾರ್ಗಸೂಚಿ ಪಾಲನೆ ಮಾಡುವುದು ಅನಿವಾರ್ಯ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೋಂಕಿನ ತೀವ್ರತೆ ಕಡಿಮೆ ಇದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಬೇಕಾದರೆ ಎಲ್ಲರೂ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲನೆ ಮಾಡಬೇಕು. ಸಾಂಸ್ಥಿಕ ಕ್ವಾರಂಟೇನ್‍ಗೆ ಒಳಗಾಗುವುದಿಲ್ಲ ಎಂದು ಪಟ್ಟು ಹಿಡಿಯುವುದು ಸರಿಯಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲರೂ ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ರಾಜ್ಯದಲ್ಲಿ ಪುನಃ ನೈಟ್ ಕಫ್ರ್ಯೂ ಇರುವುದಿಲ್ಲ ಎಂದು ಹೇಳಿರುವುದರಿಂದ ಇದು ಮುಗಿದ ಅಧ್ಯಾಯ. ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸುವಂತೆ ಸಾರ್ವಜನಿಕರಲ್ಲಿ ಕೋರಿದರು. ಈಗಾಗಲೇ ಗೃಹ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದೊಂದು ವಿಶೇಷ ಪ್ರಕರಣವಾಗಿರುವುದರಿಂದ ಸಾರ್ವಜನಿಕರು ಕೂಡ ತಮ್ಮ ತಮ್ಮ ಮನೆಯಲ್ಲಿಯೇ ಆಚರಣೆ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಬ್ರಿಟನ್‍ನಿಂದ ಆಗಮಿಸಿದ 107 ಮಂದಿಯನ್ನು ಕೋವಿಡ್ ಟೆಸ್ಟ್‍ಗೆ ಒಳಪಡಿಸಲಾಗಿತ್ತು. ಇವರಲ್ಲಿ 26 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿತ್ತು. ಇದನ್ನು ನಿಮ್ಹಾನ್ಸ್ ಪ್ರಯೋಗಾಲಕ್ಕೆ ಕಳುಹಿಸಿಕೊಟ್ಟ ಸಂದರ್ಭದಲ್ಲಿ 7 ಜನರಿಗೆ ಬ್ರಿಟನ್ ಮಾದರಿಯ ಸೋಂಕು ಕಾಣಿಸಿಕೊಂಡಿರುವುದು ಸಾಬೀತಾಗಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, 39 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಅವರನ್ನು ಸಹ ಚಿಕಿತ್ಸೆಗೆ ಒಳಪಡಿಸಿದ್ದು, ಸದ್ಯಕ್ಕೆ ಯಾವುದೇ ರೀತಿಯ ರೋಗದ ಲಕ್ಷಣಗಳು ಕಂಡುಬಂದಿಲ್ಲ. ದ್ವಿತೀಯ ಸಂಪರ್ಕದಲ್ಲಿರುವರನ್ನು ಕೂಡ ಚಿಕಿತ್ಸೆಗೆ ಒಳಪಡಿಸುತ್ತೇವೆ ಎಂದರು. ಬ್ರಿಟನ್‍ನಿಂದ ಆಗಮಿಸಿದವರಲ್ಲಿ ಕೆಲವರು ಈಗೂ ಕೂಡ ಪತ್ತೆಯಾಗಿಲ್ಲ. ಕೂಡಲೇ ಎಲ್ಲೇ ಇದ್ದರೂ ಚಿಕಿತ್ಸೆಗೆ ಒಳಪಡಬೇಕು. ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಈಗಾಗಲೇ ಗೃಹ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.

ಕಳೆದ ಎರಡು ತಿಂಗಳಿನಿಂದ ಕರ್ನಾಟಕಕ್ಕೆ ಎರಡೂವರೆ ಸಾವಿರ ಮಂದಿ ಬ್ರಿಟನ್‍ನಿಂದ ಆಗಮಿಸಿದ್ದಾರೆ. ಎಲ್ಲರನ್ನೂ ಚಿಕಿತ್ಸೆಗೆ ಒಳಪಡಿಸುವ ಕಾರ್ಯ ಮುಂದುವರೆದಿದೆ. ಕೇಂದ್ರ ಸರ್ಕಾರ ಮೊದಲು ಎರಡು ತಿಂಗಳ ಹಿಂದೆ ಬಂದವರನ್ನೂ ಪತ್ತೆ ಮಾಡುವಂತೆ ಸೂಚನೆ ನೀಡಿತ್ತು. ಇದೀಗ ಒಂದು ತಿಂಗಳ ಹಿಂದೆ ಬಂದವರನ್ನು ಮಾತ್ರ ಪತ್ತೆ ಮಾಡಬೇಕೆಂದು ಸೂಚಿಸಿದೆ. ಹೀಗೆ ಕಾಲಕಾಲಕ್ಕೆ ಮಾರ್ಗಸೂಚಿ ಬದಲಾವಣೆಯಾಗುವುದರಿಂದ ಎಲ್ಲರೂ ಇದನ್ನು ಪಾಲನೆ ಮಾಡಬೇಕು ಎಂದರು.

TRENDING