Monday, January 25, 2021
Home ರಾಜಕೀಯ ಧರ್ಮೇಗೌಡರ ಸಾವು ಆತ್ಯಹತ್ಯೆಯಲ್ಲ,ಬದಲಿಗೆ ಇವತ್ತಿನ ರಾಜಕಾರಣದ ಕೊಲೆ: ಹೆಚ್.ಡಿ.ಕೆ

ಇದೀಗ ಬಂದ ಸುದ್ದಿ

ಧರ್ಮೇಗೌಡರ ಸಾವು ಆತ್ಯಹತ್ಯೆಯಲ್ಲ,ಬದಲಿಗೆ ಇವತ್ತಿನ ರಾಜಕಾರಣದ ಕೊಲೆ: ಹೆಚ್.ಡಿ.ಕೆ

ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಸಾವು ಆತ್ಯಹತ್ಯೆಯಲ್ಲ. ಬದಲಿಗೆ ಇವತ್ತಿನ ರಾಜಕಾರಣದ ಕೊಲೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾವುಕರಾಗಿ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇವತ್ತಿನ ಕಲುಷಿತ, ತತ್ವ ರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿಯಾಗಿದೆ. ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್’ನ ಜಾತ್ಯತೀತತೆ ಪರೀಕ್ಷೆ ಮಾಡಲಾಯಿತು. ಆದರೆ, ಈ ಪರೀಕ್ಷೆಯಲ್ಲಿ ಧರ್ಮೇಗೌಡ ಎಂಬ ಹೃದಯವಂತನ ಬಲಿಯಾಗಿದೆ. ಪರೀಕ್ಷೆ ಮಾಡಿದವರಿಗೆ ಇದೀಗ ಉತ್ತರ ಸಿಕ್ಕಿರಬಹುದು. ಫಲಿತಾಂಶದಿಂದಲಾದರೂ ಅವರ ಆತ್ಮಾವಲೋಕನವಾಗಲಿ. ನನ್ನ ಜೀವನದ ಅತ್ಯಂತ ಮರೆಯಲಾಗದ ದುರಂತ ದಿನ ಎಂದು ಕಣ್ಣೀರಿಟ್ಟರು.

ಧರ್ಮೇಗೌಡ ಅವರ ಸಾವಿನ ಬಗ್ಗೆ ಸತ್ಯಾಂಶ ಹೊರಬರಲು ತನಿಖೆಯಾಗಬೇಕು. ಅಕಾಲಿಕ ಸಾವಿಗೆ ತುತ್ತಾಗುತ್ತಾರೆ ಎಂಬು ಊಹೆ ಕೂಡ ಮಾಡಿರಲಿಲ್ಲ. ಘಟನೆಗೆ ಕಾರಣಕರ್ತರಾರು ಎಂಬ ಸತ್ಯಾಂಶ ಹೊರಬರಬೇಕು. ಇಂದಿನ ರಾಜಕಾರಣದಲ್ಲಿ ನಿಜವಾದ ಧರ್ಮರಾಯರಾಗಿದ್ದರು. ಸರಳ, ಸಜ್ಜನ, ಪ್ರಾಮಾಣಿಕರಾಗಿದ್ದರು. ಈ ಘಟನೆಯಿಂದ ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜಕೀಯ ಇರುತ್ತೆ, ಹೋಗುತ್ತೆ. ಇಂತಹ ಅನಾಹುತ ಮರುಕಳಿಸದಂತೆ ಎಲ್ಲಾ ರಾಜಕಾರಣಿಗಳೂ ನೋಡಿಕೊಳ್ಳಬೇಕು.

ಮೇಲ್ಮನೆಯಲ್ಲಿ ನಡೆದ ಘಟನೆ ಬಳಿದ ಧರ್ಮೇಗೌಡ ಅವರು ಅತ್ಯಂತ ಮಾನಸಿಕ ಖಿನ್ನತೆಗೊಳಗಾಗಿದ್ದರು. ಧರ್ಮೇಗೌಡ ಅವರು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅವರ ಸಹೋದರ ಬೋಜೇಗೌಡ ಅವರು 10 ದಿನಗಳ ಹಿಂದೆಯೇ ನನಗೆ ಹೇಳಿದ್ದರು. ಈ ವೇಳೆ ನಾನು ಧರ್ಮೇಗೌಡ ಅವರೊಂದಿಗೆ ಸುಮಾರು 30 ನಿಮಿಷಗಳ ಕಾಲ ಮಾತನಾಡಿ, ಇದರಲ್ಲಿ ನಿಮ್ಮ ತಪ್ಪೇನು ಇಲ್ಲಾ ಎಂದು ಹೇಳಿದ್ದೆ.

ರಾಜ್ಯದ ಸಂಪತ್ತು ಲೂಟಿ ಮಾಡಿದವರು ಧೈರ್ಯವಾಗಿ ಬದುಕುತ್ತಾರೆ. ಇಂತಹ ಸೂಕ್ಷ್ಮ ಜೀವಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಹುಡುಗಾಟಿಕೆ ಆಡುವುದು ಬೇಡ. ಬಹುಮತ ಇಲ್ಲದ ಮೇಲೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದರೆ ಏನಾಗುತ್ತಿತ್ತು? ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನು ಪರೀಕ್ಷೆ ಮಾಡಬೇಕಿತ್ತೆ? ಯಾವುದೇ ಒತ್ತಡಕ್ಕೆ ಮಣಿಯುವುದು ಬೇಡ ಎಂದು ನಾನು ಮತ್ತು ದೇವೇಗೌಡರು ಸಲಹೆ ಮಾಡಿದ್ದೆವು ಎಂದು ತಿಳಿಸಿದ್ದಾರೆ.

ಧರ್ಮೇಗೌಡ ನಿಷ್ಕಲ್ಮಶ ವ್ಯಕ್ತಿ, ಇದೊಂದು ಘೋರ ಘಟನೆ: ಕಣ್ಣೀರಿಟ್ಟ ದೇವೇಗೌಡ
ಧರ್ಮೇಗೌಡ ಅವರ ಆತ್ಮಹತ್ಯೆ ಸುದ್ದಿ ಕೇಳಿ ಕಣ್ಣೀರಿಟ್ಟ ಜೆಡಿಎಸ್ ವರಿಷ್ಠ ದೇವೇಗೌಡ ಅವರು, ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಧರ್ಮೇಗೌಡ ಅವರ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಜೀವನದಲ್ಲಿ ಅತ್ಯಂತ ಘೋರವಾದಂತಹ ಘಟನೆ ಇದು. ಪರಿಷತ್’ನ ಅಧಿವೇಶನಕ್ಕೂ ಮುನ್ನ ತಮ್ಮ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಅವರಿಗೆ ಸೂಕ್ತ ಸಲಹೆ ನೀಡಿದ್ದು, ಸಭಾಪತಿ ಸ್ಥಾನದಲ್ಲಿ ಕೂರಬೇಡಿ ಎಂದು ಹೇಳಿದ್ದೆ. ಅವರ ಕೊನೆ ಗಳಿಗೆಯ ರಾಜಕೀಯ ಜೀವನ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ಧರ್ಮೇಗೌಡ ಅವರ ತಂದೆ ಕಾಲದಿಂದಲೇ ಕುಟುಂಬಕ್ಕೂ ನನಗೂ ಮರೆಯಲಾಗದ ಬಾಂಧವ್ಯ ಎನ್ನುವ ಮೂಲಕ ದೇವೇಗೌಡ ಅವರು ತಮ್ಮ ಹಳೆಯ ಒಡನಾಟವನ್ನು ಇದೇ ವೇಳೆ ಸ್ಮರಿಸಿದರು.

ನಾವೂ ಬಡವಾಗಿದ್ದೇವೆ: ಸಿಎಂ ಯಡಿಯೂರಪ್ಪ
ಯಾರೂ ನಿರೀಕ್ಷೆ ಮಾಡಿರಲಿಲ್ಲ. ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ, ಸಹಕಾರ ಕ್ಷೇತ್ರ, ಶಾಸಕರಾಗಿದ್ದವರು. ಹೀಗೆ ತಮ್ಮದೇ ಆದ ದಾಖಲೆ ಸಾಧಿಸಿ ಉಪಸಭಾಪತಿಯಾಗಿದ್ದರು. ಯಾರಿಗೂ ನೋವು ಆಗಂದಂತೆ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡು ಅವರ ಕುಟುಂಬ ಮಾತ್ರವಲ್ಲ ನಾವು ಕೂಡ ಬದವಾಗಿದ್ದೇವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಇನ್ನು ಧರ್ಮೇಗೌಡ ಅವರ ಆತ್ಮಹತ್ಯೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಇತರೆ ರಾಜಕೀಯ ಗಣ್ಯಾತಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

TRENDING