ಹಾವೇರಿ : ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಸುಗಮ ಮತ ಎಣಿಕೆ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಡಿಸೆಂಬರ್ 30ರ ಬುಧವಾರ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ ಹಾಗೂ ಶುಷ್ಕ ದಿವಸ ಎಂದು ಘೋಷಿಸಿ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಸಂಗ್ರಹಣೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 30ರ ಬೆಳಿಗ್ಗೆ 6 ರಿಂದ ಡಿಸೆಂಬರ್ 31ರ ಬೆಳಿಗ್ಗೆ 6 ಗಂಟೆವರೆಗೆ ಭಾರತೀಯ ದಂಡಪ್ರಕ್ರಯೆ ಸಂಹಿತೆ 1973ರ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪುಗೂಡಿ ಓಡಾಡುವುದನ್ನು ನಿಷೇಧಿಸಿದೆ. ಜೀವಕ್ಕೆ ಹಾನಿ ಉಂಟುಮಾಡುವ ಮಾರಕಾಸ್ತ್ರಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಓಡಾಡುವುದನ್ನು ನಿಷೇಧಿಸಲಾಗಿದೆ. ಕ್ಷಾರಪದಾರ್ಥ, ಸ್ಪೋಟಕ ವಸ್ತು, ದಾಹಕ ವಸ್ತುಗಳನ್ನು ಜೊತೆಗಿಟ್ಟುಕೊಂಡು ಓಡಾಡುವುದು ಹಾಗೂ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ಸಭೆ-ಸಮಾರಂಭ ಅಥವಾ ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ. ಮದ್ದು, ಪಟಾಕಿ ಮಾರಾಟ ವ್ಯವಹಾರವನ್ನು ಈ ಅವಧಿಯಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ ಹಾಗೂ ಇಂತಹ ಮಾರಾಟ ಅಂಗಡಿಗಳನ್ನು ಈ ಅವಧಿಯಲ್ಲಿ ಮುಚ್ಚಲು ಸೂಚನೆ ನೀಡಲಾಗಿದೆ.
ಮದ್ಯ ಮಾರಾಟ ಇಲ್ಲ : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 308 ಎಸಿ ಮತ್ತು ಕರ್ನಾಟಕ ಅಬಕಾರಿ ಪರವಾನಿಗೆ(ಸಾಮಾನ್ಯ ಷರತ್ತುಗಳು) ತಿದ್ದುಪಡಿ ನಿಯಮಗಳು 1996ರ ನಿಯಮ 10 ಬಿ ಅನ್ವಯ ಡಿಸೆಂಬರ್ 29ರ ಇಂದು ಮಧ್ಯರಾತ್ರಿಯಿಂದ ಡಿಸೆಂಬರ್ 30ರ ಮಧ್ಯರಾತ್ರಿ ವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಅವಧಿಯನ್ನು ಶುಷ್ಕ ದಿವಸ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಶುಷ್ಕ ದಿನದಂದು ಜಿಲ್ಲೆಯ ಮತ ಎಣಿಕೆ ನಡೆಯುವ ಸಮಯದಲ್ಲಿ ಮದ್ಯದ ಅಂಗಡಿಗಳು, ಬೀಯರ್ ಬಾರ್, ಕ್ಲಬ್ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಆದೇಶದ ಅನುಷ್ಠಾನ ಕುರಿತಂತೆ ಅಧಿಕಾರಗಳು ಜಿಲ್ಲೆಯಾದ್ಯಂತ ನಿಗಾವಹಿಸಲು ಸೂಚನೆ ನೀಡಲಾಗಿದೆ.