ಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31 ರಂದು ಬೆಳಗ್ಗೆ 6 ರಿಂದ ಜನವರಿ 1 ರಂದು ಬೆಳಗ್ಗೆ 6 ಗಂಟೆಯವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇದರ ನಡುವೆ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ವಾಹನಗಳ ಸಂಚಾರ ಮತ್ತು ಪ್ರವೇಶ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದು, ಡಿ. 31ರ ರಾತ್ರಿ 8 ರಿಂದ ಜ. 1ರ ಮುಂಜಾನೆ 2ರವರೆಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ಪಾರ್ಕ್ ರಸ್ತೆ, ರೆಸಿಡೆನ್ಸಿ ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತು ಪ್ರವೇಶ ನಿಷೇಧ ಮಾಡಲಾಗಿದೆ.
ಡಿ. 31ರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಕೋ ಲೇಔಟ್, ಏರ್ಪೋರ್ಟ್, ವೈಟ್ ಫೀಲ್ಡ್, ಹೆಚ್ಎಸ್ಆರ್ ಲೇಔಟ್, ಹಲಸೂರು, ಕೆ.ಆರ್.ಪುರ, ಪುಲಿಕೇಶಿನಗರ, ಬಾಣಸವಾಡಿ, ಆಡುಗೋಡಿ, ಮೈಸೂರು ರಸ್ತೆ, ಬಸವನಗುಡಿ, ಜಯನಗರ, ಮಲ್ಲೇಶ್ವರಂ, ಬನಶಂಕರಿ, ಕೆಂಗೇರಿ, ಯಶವಂತಪುರ, ಹೆಬ್ಬಾಳ, ಹಾಗೂ ಪೀಣ್ಯ ಪ್ರದೇಶಗಳಲ್ಲಿರುವ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ
ಹೊಸ ವರ್ಷಾಚರಣೆ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ರಸ್ತೆಯಲ್ಲಿ ಹೊಸವರ್ಷಾಚರಣೆ ನಡೆಸುವಂತಿಲ್ಲ. ಬೆಂಗಳೂರಿನ ಹೊರ ಭಾಗದಲ್ಲಿಯೂ ಹೊಸವರ್ಷಕ್ಕೆ ನಿರ್ಬಂಧವಿದೆ. ಖಾಸಗಿ ಜಾಗದಲ್ಲಿ ಆಚರಿಸಿಕೊಳ್ಳಬಹುದು. ಬಾರ್, ಪಬ್, ಕ್ಲಬ್ ಗಳ ಬಂದ್ ಆಗಲಿದೆ ಎಂದರು.
ಡ್ಯಾನ್ಸ್, ಮ್ಯೂಸಿಕ್ ಗೆ ಅವಕಾಶ ಇರುವುದಿಲ್ಲ. ಡಿಸೆಂಬರ್ 31 ರಂದು ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ದಿನ ನಿಷೇಧಾಜ್ಞೆ ಜಾರಿಯಾಗಲಿದ್ದು, ರಸ್ತೆಯಲ್ಲಿ ಹೊಸವರ್ಷಾಚರಣೆ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.