Tuesday, January 19, 2021
Home ಸುದ್ದಿ ಜಾಲ ನಾಳೆ ಗ್ರಾ. ಪಂಚಾಯಿತಿ ಚುನಾವಣೆ ಅಖೈರು : 8,013 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಇದೀಗ ಬಂದ ಸುದ್ದಿ

ನಾಳೆ ಗ್ರಾ. ಪಂಚಾಯಿತಿ ಚುನಾವಣೆ ಅಖೈರು : 8,013 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಮಂಡ್ಯಎರಡು ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮತಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಆರಂಭವಾಗಲಿದ್ದು ಕಣದಲ್ಲಿರುವ 8.013 ಮಂದಿ ಭವಿಷ್ಯ ನಿರ್ಧಾರವಾಗಲಿದೆ.

‘ಈ ಬಾರಿ ಶೇ 87.74ರಷ್ಟು ಮತದಾನ ನಡೆದಿದೆ. ಕಳೆದ ಬಾರಿ ಶೇ 85ರಷ್ಟು ಮತದಾನವಾಗಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯ ಜನರು ಹಕ್ಕು ಚಲಾವಣೆ ಮಾಡಿದ್ದಾರೆ. ಶಾಂತಿಯುತವಾಗಿ ಮತ ಎಣಿಕೆ ಕಾರ್ಯ ನಡೆಸಲು ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ. ಏಜೆಂಟರ ಸಮಕ್ಷಮದಲ್ಲಿ ಎಣಿಕೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಎಣಿಕೆ ಕಾರ್ಯ ಆರಂಭಗೊಂಡ ನಂತ ಯಾವುದೇ ಆಕ್ಷೇಪ ಇದ್ದರೂ ಏಜೆಂಟರು ಚುನಾವಣಾಧಿಕಾರಿ, ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗೆ ದೂರು ಸಲ್ಲಿಸಬಹುದು. ಚುನಾವಣಾಧಿಕಾರಿಯ ನಿರ್ಧಾರ ಅಂತಿಮವಾಗಿರುತ್ತದೆ. ಅದರ ವಿರುದ್ದವೂ ಆಕ್ಷೇಪಗಳಿದ್ದರೆ ಸಕ್ಷಮ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು. ಶಾಂತಿಯುತವಾಗಿ ಎಣಿಕೆ ಕಾರ್ಯ ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದರು.

‘ಈ ಚುನಾವಣೆಯಲ್ಲಿ ಪಾಂಡವಪುರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಶೇ 91ರಷ್ಟು ಮತದಾನವಾಗಿದೆ. ನಾಗಮಂಗಲ ಶೇ 90, ಕೆ.ಆರ್‌.ಪೇಟೆ ಶೇ 89.26, ಶೇ ಮಂಡ್ಯ 88.04, ಮದ್ದೂರು ತಾಲ್ಲೂಕಿನಲ್ಲಿ ಶೇ 87.05, ಶ್ರೀರಂಗಪಟ್ಟಣ ಶೇ 85.02, ಮಳವಳ್ಳಿ ಶೇ 84.80ರಷ್ಟು ಮತದಾನವಾಗಿದೆ’ ಎಂದರು.

‘ಮಂಡ್ಯದ ಸರ್ಕಾರಿ ಮಹಾವಿದ್ಯಾಲಯ, ಮದ್ದೂರಿನ ಎಚ್‌.ಕೆ.ವೀರಣ್ಣಗೌಡ ಕಾಲೇಜು, ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜು, ಪಾಂಡವಪುರದ ಪಿಎಸ್‌ಎಸ್‌ಕೆ ಪ್ರೌಢಶಾಲೆ, ಶ್ರೀರಂಗಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಆರ್‌.ಪೇಟೆಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ನಾಗಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಣಿಕೆ ಕಾರ್ಯ ನಡೆಯಲಿದೆ’ ಎಂದು ಹೇಳಿದರು.

‘ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 513 ಮೇಜುಗಳನ್ನು ಸಿದ್ಧಗೊಳಿಸಲಾಗಿದೆ. ಪ್ರತಿ ಮೇಜಿಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕರು ಸೇರಿ ಒಟ್ಟು 513 ಮೇಲ್ವಿಚಾರಕರನ್ನು ನೇಮಿಸಲಾಗಿದೆ. 52 ಮೇಜುಗಳನ್ನು ಮೀಸಲಿಡಲಾಗಿದೆ. 1,026 ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದ್ದು ಒಟ್ಟು 1,128 ಮಂದಿ ಕರ್ತವ್ಯ ನಿರ್ವಹಿಸುವರು. ಎಣಿಕೆ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ಮೂಲಲಕ ತರಬೇತಿ ನೀಡಲಾಗಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಎಣಿಕೆ ಕೊಠಡಿಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.

‘ಒಟ್ಟು 230 ಗ್ರಾಮ ಪಂಚಾಯಿತಿಗಳಲ್ಲಿ 1,481 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಅದರಲ್ಲಿ 149 ಕ್ಷೇತ್ರಗಳಲ್ಲಿ, 658 ಸ್ಥಾನಗಳ ಅವಿರೋಧ ಆಯ್ಕೆಯಾಗಿದೆ. ಸರ್ಕಾರದ ಸೂಚನೆಯಂತೆ ಆಸೆ, ಆಮಿಷಗಳಿಗೆ ಒಳಗಾಗಿ ಅವಿರೋಧ ಆಯ್ಕೆಯಾಗಿದೆಯೇ ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸಲಾಗುವುದು. ಕದಲೂರು ಗ್ರಾಮ ಪಂಚಾಯಿತಿ ಎಲ್ಲಾ 12 ಸ್ಥಾನಗಳು ಅವಿರೋಧ ಆಯ್ಕೆಯಾಗಿದೆ. ಅಲ್ಲಿ ಮೊದನಿಂದಲೂ ನಡೆದುಕೊಂಡ ಬಂದ ರೀತಿಯಲ್ಲಿ ಈಗಲೂ ಆಯ್ಕೆ ಮಾಡಲಾಗಿದೆ’ ಎಂದರು.

‘ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿ ಅಬಕಾರಿ ಇಲಾಖೆ ಸಿಬ್ಬಂದಿ ಒಟ್ಟು ₹ 45.90 ಲಕ್ಷ ಮೌಲ್ಯದ ಮದ್ಯ ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 211 ಪ್ರಕರಣ ದಾಖಲಾಗಿದ್ದು 125 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.1,044 ಲೀಟರ್‌ ಮದ್ಯ, 58 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳೀದರು.

ವಿಜಯೋತ್ಸವಕ್ಕೆ ಅವಕಾಶ ಇಲ್ಲ

‘ಚುನಾವಣೆ ಫಲಿತಾಂಶ ಬಂದ ನಂತರ ವಿಜಯೋತ್ಸವ ನಡೆಸಲು ಅವಕಾಶ ಇರುವುದಿಲ್ಲ. ಗೆದ್ದ ಅಭ್ಯರ್ಥಿಗಳು ದೇವಾಯಕ್ಕೆ ತೆರಳಿ ಪೂಜೆ ಸಲ್ಲಿಸಲು ಅವಕಾಶವಿದೆ. ಆದರೆ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.

‘ಮುಂಜಾಗ್ರತಾ ಕ್ರಮವಾಗಿ ಮತಗಟ್ಟೆಗಳಲ್ಲಿ ಮೂರು ಹಂತದ ಭದ್ರತೆ ಒದಗಿಸಲಾಗಿದೆ. 4 ಕೆಎಸ್‌ಆರ್‌ಪಿ, 14 ಜಿಲ್ಲಾ ಶಸಸ್ತ್ರ ಮೀಸಲು ಪಡೆ, 38 ಪಿಎಸ್‌ಐ, 67 ಎಎಸ್‌ಐ, 655 ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಭದ್ರತೆ ಒದಗಿಸಲಿದ್ದಾರೆ’ ಎಂದರು.

‘ನೀತಿ ಸಂಹಿತೆ ಉಲ್ಲಂಘನೆಯಡಿ 8 ಪ್ರಕರಣ ದಾಖಲಾಗಿವೆ. ಕುಕ್ಕರ್‌, ಸೀರೆ ವಿತರಣೆ ಪ್ರಕರಣದಲ್ಲಿ ಪ್ರಕರಣ ದಾಖಲಾಗಿವೆ. ಪಾಂಡವಪುರ ತಾಲ್ಲೂಕು ಅಗಟಹಳ್ಳಿಯಲ್ಲಿ ದಲಿತರ ಮನೆಗೆ ನುಗ್ಗಿ ವಸ್ತುಗಳ ಧ್ವಂಸ ಮಾಡಿದ ಪ್ರಕರಣದಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

TRENDING