ಬೀಜಿಂಗ್, ಡಿ.29: ಕೊರೊನಾವೈರಸ್ ಕೇಂದ್ರ ಸ್ಥಳವಾಗಿರುವ ಚೀನಾದ ವುಹಾನ್ನಲ್ಲಿ ತುರ್ತು ಕೋವಿಡ್-19 ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ಗುಂಪುಗಳ ಜನರಿಗೆ ತುರ್ತು ಕೋವಿಡ್-19 ಲಸಿಕೆಯನ್ನು ಪ್ರಾರಂಭಿಸಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
15 ಜಿಲ್ಲೆಗಳಲ್ಲಿ 48 ಗೊತ್ತುಪಡಿಸಿದ ಕ್ಲಿನಿಕ್ಗಳಲ್ಲಿ ವ್ಯಾಕ್ಸಿನೇಷನ್ ಡಿಸೆಂಬರ್ 24 ರಂದು ಪ್ರಾರಂಭವಾಗಿದ್ದು, 18 ರಿಂದ 59 ವರ್ಷದೊಳಗಿನ ಕೆಲವು ಗುಂಪುಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ವುಹಾನ್ ನಗರದ ರೋಗ ತಡೆ ಮತ್ತು ನಿಯಂತ್ರಣ ಕೇಂದ್ರದ ಉಪ ನಿರ್ದೇಶಕ ಹಿಝೇನ್ಹು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲಸಿಕೆ ಪಡೆದವರು ನಾಲ್ಕು ವಾರಗಳ ಅವಧಿಯಲ್ಲಿ ಎರಡು ಬಾರಿ ಲಸಿಕೆ ಪಡೆದುಕೊಳ್ಳುವ ಅವಶ್ಯಕತೆಯಿದೆ ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಕಳೆದ ವರ್ಷ ಡಿಸೆಂಬರ್ 31 ರಂದು ಹುಬೈ ಪ್ರಾಂತ್ಯದ ರಾಜಧಾನಿಯಾದ ವುಹಾನ್ನಲ್ಲಿ ಮೊದಲ ಕೊರೊನಾವೈರಸ್ಸ್ ಪ್ರಕರಣಗಳು ವರದಿಯಾದವು. ಜನವರಿ 23 ರಿಂದ ಒಂದು ಕೋಟಿಗೂ ಅಧಿಕ ಜನರಿರುವ ನಗರದಲ್ಲಿ ಲಾಕ್ಡೌನ್ ಹೇರಲಾಯಿತು. ವೈರಸ್ ನಿಯಂತ್ರಣ ಬಂದ ಬಳಿಕ ಇದೇ ವರ್ಷದ ಏಪ್ರಿಲ್ 8ರಿಂದ ಲಾಕ್ಡೌನ್ ತೆರವುಗೊಳಿಸಲಾಯಿತು.
ಹುಬೈ ಪ್ರಾಂತ್ಯದಲ್ಲಿ ಕೊರೊನಾವೈರಸ್ನಿಂದ ಸಾವನ್ನಪ್ಪಿದವರ ಸಂಖ್ಯೆ 4,512 ಆಗಿದ್ದು, ವುಹಾನ್ನಲ್ಲಿ 3,869 ಮಂದಿ ಸೇರಿದ್ದಾರೆ.