ಬೆಂಗಳೂರು, ಡಿ. 29: ಕರ್ನಾಟಕದಲ್ಲಿ ಮಂಗಳವಾರ 662 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 917571ಕ್ಕೆ ಏರಿಕೆಯಾಗಿದೆ.
ಬ್ರಿಟನ್ ನ ಕೊರೊನಾ ರೂಪಾಂತರ ಸೋಂಕಿನ ಭೀತಿ ನಡುವೆಯೂ ರಾಜ್ಯದಲ್ಲಿ ಕ್ರಮೇಣವಾಗಿ ಕೊರೊನಾ ಪ್ರಕರಣಗಳು ಇಳಿಕೆಯಾಗಿರುವುದು ನಿಟ್ಟುಸಿರುಬಿಡುವಂತೆ ಮಾಡಿವೆ. ಬ್ರಿಟನ್ ನಿಂದ ಭಾರತಕ್ಕೆ ಮರಳಿ ಬಂದ ಆರು ಜನರಲ್ಲಿ ರೂಪಾಂತರದ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಮೂವರು ಕರ್ನಾಟಕದವರಾಗಿದ್ದಾರೆ ಎಂದು ತಿಳಿದುಬಂದಿದೆ. ಬ್ರಿಟನ್ ನಿಂದ ಹಿಂದಿರುಗಿದ್ದ ಮೂವರಲ್ಲಿ ಈ ಹೊಸ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಇಂದು 1,344 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಚೇತರಿಕೆ ಪ್ರಕರಣಗಳ ಸಂಖ್ಯೆ 8,93,617ಗೆ ತಲುಪಿದೆ. ಸೋಂಕಿನಿಂದ ಇಂದು 4 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸೋಂಕಿನಿಂದ ಇದುವರೆಗೂ ಒಟ್ಟು 12,074 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 206 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 11,861 ಇದೆ.