Thursday, January 21, 2021
Home ಅಂತರ್ ರಾಜ್ಯ ಪಂಜಾಬ್‌ನಲ್ಲಿ ರೈತರಿಂದ 1,561 ಮೊಬೈಲ್ ಟವರ್‌ಗಳಿಗೆ ಹಾನಿ

ಇದೀಗ ಬಂದ ಸುದ್ದಿ

ಪಂಜಾಬ್‌ನಲ್ಲಿ ರೈತರಿಂದ 1,561 ಮೊಬೈಲ್ ಟವರ್‌ಗಳಿಗೆ ಹಾನಿ

ಚಂಡೀಗಡ: ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದಲ್ಲಿ ಈ ವರೆಗೆ ಪಂಜಾಬ್‌ನಲ್ಲಿ 1,561 ಮೊಬೈಲ್ ಟವರ್‌ಗಳಿಗೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಹೇಳಿದ್ದಾರೆ. ಟೆಲಿಕಾಂ ಸೇವೆಗಳಿಗೆ ಹಾನಿಯುಂಟು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಅವರು ಸೂಚಿಸಿದ್ದಾರೆ.

‘ಯಾವುದೇ ಕಾರಣಕ್ಕೂ ಪಂಜಾಬ್‌ನಲ್ಲಿ ಅರಾಜಕತೆ ಸೃಷ್ಟಿಯಾಗಲು ಬಿಡುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ,’ ಎಂದು ಸಿಎಂ ಅಮರೀಂದರ್‌ ಸಿಂಗ್‌ ಹೇಳಿದ್ದಾರೆ. ಇಂತಹ ಕೃತ್ಯಗಳನ್ನು ನಡೆಸದಂತೆ ಪದೇ ಪದೇ ಮಾಡಿದ ಮನವಿಗಳನ್ನು ನಿರ್ಲಕ್ಷಿಸಲಾಗಿದೆ. ಅದ್ದರಿಂದ ತಮ್ಮ ನಿಲುವನ್ನು ಕಠಿಣಗೊಳಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

‘ಮೊಬೈಲ್ ಸೇವೆಗಳಿಗೆ ತೊಂದರೆಯಾದರೆ, ವಿದ್ಯಾರ್ಥಿಗಳು, ವರ್ಕ್‌ ಫ್ರಮ್‌ ಹೋಮ್‌ನಲ್ಲಿ ದುಡಿಯುತ್ತಿರುವವರು ಮತ್ತು ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆಯಾಗುತ್ತದೆ. ಹಿಂಸಾಚಾರದ ಮಾರ್ಗವು ಪ್ರತಿಭಟನಾಕಾರರನ್ನು ಜನಸಾಮಾನ್ಯರಿಂದ ದೂರವಿರಿಸುತ್ತದೆ. ಇದು ರೈತರ ಸಮುದಾಯದ ಹಿತಾಸಕ್ತಿಗೆ ಹಾನಿಕಾರಕ,’ ಎಂದು ಸಿಎಂ ಅಮರೀಂದರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್‌ನ 22 ಜಿಲ್ಲೆಗಳಲ್ಲಿ ಒಟ್ಟು 21,306 ಮೊಬೈಲ್ ಟವರ್‌ಗಳಿದ್ದು, ಇದರಲ್ಲಿ ಒಟ್ಟು 1,561 ಮೊಬೈಲ್ ಟವರ್‌ಗಳಿಗೆ ಹಾನಿಯಾಗಿದೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ಬಗ್ಗೆ ಉಂಟಾಗಿರುವ ತಪ್ಪು ಕಲ್ಪನೆಗಳಿಂದಾಗಿ ರೈತರು ಮೊಬೈಲ್‌ ಟವರ್‌ಗಳಿಗೆ, ವಿಶೇಷವಾಗಿ ರಿಲಯನ್ಸ್‌ ಸಂಸ್ಥೆಗೆ ಸೇರಿದ ‘ಜಿಯೊ ಟವರ್‌’ಗಳಿಗೆ ಹಾನಿ ಉಂಟುಮಾಡುತ್ತಿದ್ದಾರೆ.

ಅದಾನಿ ಅಥವಾ ಮುಕೇಶ್‌ ಅಂಬಾನಿ ಒಡೆತನದ ಯಾವ ಸಂಸ್ಥೆಯೂ ಕೃಷಿ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ಆದರೂ, ‘ಹೊಸ ಕಾಯ್ದೆಗಳಿಂದ ಅದಾನಿ- ಅಂಬಾನಿ ಅವರಿಗೆ ಹೆಚ್ಚಿನ ಲಾಭವಾಗಲಿದೆ’ ಎಂಬ ಭಾವನೆ ರೈತರಲ್ಲಿ ಮೂಡಿದೆ. ಇದರಿಂದಾಗಿ ಈ ಸಂಸ್ಥೆಗಳಿಗೆ ಸೇರಿದ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

TRENDING