Wednesday, January 27, 2021
Home ರಾಜ್ಯ ಜನವರಿ 9ರಂದು ರೈಲ್‌ಬಂದ್ ಚಳವಳಿ : ವಾಟಾಳ್ ನಾಗರಾಜ್

ಇದೀಗ ಬಂದ ಸುದ್ದಿ

ಜನವರಿ 9ರಂದು ರೈಲ್‌ಬಂದ್ ಚಳವಳಿ : ವಾಟಾಳ್ ನಾಗರಾಜ್

ತುಮಕೂರು,ಡಿ.28: ರಾಜ್ಯ ಸರ್ಕಾರ ಯಾವುದೇ ಚಿಂತನೆ ಇಲ್ಲದೇ ರಾಜಕೀಯಕ್ಕಾಗಿ ಸ್ಥಾಪಿಸಿರುವ ಮರಾಠ ಪ್ರಾಧಿಕಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಜ.9ರಂದು ರಾಜ್ಯದೆಲ್ಲೆಡೆ ಕನ್ನಡ ಪರ ಹೋರಾಟಗಾರರು ರೈಲು ಬಂದ್ ಚಳವಳಿ ನಡೆಸಲಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಂಸ್ಕೃತಿ ಹಿನ್ನೆಲೆ ಇಲ್ಲ, ಗಡಿನಾಡಿನ ಬಗ್ಗೆ ತಿಳಿದಿಲ್ಲ, ಎಷ್ಟೇ ಒತ್ತಡ ಹಾಕಿದರೂ ಸರ್ಕಾರ ಮರಾಠ ಪ್ರಾಧಿಕಾರವನ್ನು ಹಿಂಪಡೆಯಲು ಮೊಂಡಾಟವಾಡುತ್ತಿದ್ದು, ರಾಜ್ಯದ 500 ಕಡೆ ರೈಲುಬಂದ್ ನಡೆಯಲಿದೆ, ಯಾವುದೇ ಸ್ಥಳದಲ್ಲಿ ಬೇಕಾದರೂ ಹೋರಾಟಗಾರರು ರೈಲು ತಡೆಯಲಿದ್ದಾರೆ ಎಂದರು.

ಮರಾಠ ಪ್ರಾಧಿಕಾರವನ್ನು ಶಾಸಕಾಂಗ ಸಭೆಯಲ್ಲಿ ಆಗಲಿ, ಸಚಿವ ಸಂಪುಟ, ಸರ್ವ ಪಕ್ಷದ ಸಭೆಯಲ್ಲಿ ಚರ್ಚಿಸದೇ ಏಕಾಏಕಿ ನಿರ್ಧಾರ ಕೈಗೊಳ್ಳುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಬೆಳಗಾವಿಯನ್ನು ಮಹಾರಾಷ್ಟಕ್ಕೆ ಸೇರಿಸುವಂತೆ ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡುವ ಮೂಲಕ ಕರ್ನಾಟಕದ ಇತಿಹಾಸದಲ್ಲಿಯೇ ಮೊದಲಬಾರಿಗೆ ಪರಭಾಷೆಗೆ ಸರ್ಕಾರದಿಂದ ಮಾನ್ಯತೆ ದೊರೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿಎಸ್‌ವೈ, ಗೃಹಸಚಿವ ಬೊಮ್ಮಾಯಿ ರಾಜೀನಾಮೆಗೆ ಒತ್ತಾಯ: ರಾಜ್ಯ ಸರ್ಕಾರದಲ್ಲಿ ಒಮ್ಮತವಿಲ್ಲ, ಸಚಿವರು ಮತ್ತು ಅಧಿಕಾರಿಗಳ ಮಧ್ಯೆ ವಿಶ್ವಾಸವಿಲ್ಲದಂತಹ ಪರಿಸ್ಥಿತಿ ಇದೆ, ಅಧಿಕಾರಿಗಳು ಯಾರಿಗೂ ಅಂಜದAತಹ ವಾತಾವರಣವಿದೆ, ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ, ಗೃಹ ಸಚಿವರಾಗಲಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಮ್ಮ ಕಿರಿಯ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಗೃಹ ಸಚಿವ ಎಸ್.ಆರ್.ಬೊಮ್ಮಾಯಿ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಸಚಿವರಿಗೆ ವಿಶ್ವಾಸವಿಲ್ಲ, ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದು, ಸಚಿವ ಸಂಪುಟ ಹದಗೆಟ್ಟಿದೆ, ಸಚಿವರೊಂದಿಗೆ ಚರ್ಚಿಸದೇ, ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸದೇ ಘೋಷಣೆ ಮಾಡುತ್ತಿದ್ದು, ರಾಜ್ಯದಲ್ಲಿ ಆಡಳಿತದಿಂದ ಕುಸಿದಿದ್ದು, ಮುಖ್ಯ ಕಾರ್ಯದರ್ಶಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ, ಮನಸೋಇಚ್ಛೆ ವರ್ತಿಸುವ ಅಧಿಕಾರಿಗಳಿಗೆ ನಿಯಂತ್ರಣ ಹಾಕಬೇಕಾದ ಉನ್ನತ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ರಾಜ್ಯದಲ್ಲಿ ಆಡಳಿತ ಕುಸಿಯಲು ಕಾರಣವಾಗಿರುವ ಯಡಿಯೂರಪ್ಪ ಅವರು ರಾಜೀನಾಮಗೆ ನೀಡಬೇಕು, ಅವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಒತ್ತಾಯಿಸಿದರು.

ಬೆಳಗಾವಿಯಲ್ಲಿ ಕನ್ನಡ ಭಾವುಟ ಹಾರಿಸಲು ಮುಂದಾಗಿರುವ ಕನ್ನಡ ಹೋರಾಟಗಾರರ ಮೇಲೆ ದಾಂಧಲೆ ಮಾಡಿದ್ದಾರೆ, ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸುವುದು ಅವಶ್ಯಕವಾಗಿದ್ದು, ರಾಜ್ಯದ ಕನ್ನಡ ಹೋರಾಟಗಾರರು ಬೆಳಗಾವಿ ಹೋಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಿರ್ಭಯಾ ಯೋಜನೆಯಡಿ ಕ್ಯಾಮರಾ ಅಳವಡಿಸಲು ಕರೆದಿರುವ ಟೆಂಡರ್ ವಿಚಾರವಾಗಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯುತ್ತಿದೆ, ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೇ ಪತ್ರಿಕಾಗೋಷ್ಠಿಗಳನ್ನು ಕರೆಯುತ್ತಿದ್ದಾರೆ ಎಂದರೆ ಸರ್ಕಾರದ ಆಡಳಿತ ಎಷ್ಟು ಕುಸಿದಿದೆ ಎನ್ನುವುದು ಅರ್ಥವಾಗುತ್ತದೆ, ನಿರ್ಭಯಾ ಹೆಸರಿನಲ್ಲಿ ಲೂಟಿ ಮಾಡಲು ಮುಂದಾಗಿದ್ದು, ಈ ಯೋಜನೆಯ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಔರಾದ್ಕಾರ್ ವರದಿ ಜಾರಿಯಾಗಲಿ: ನಿರ್ಭಯಾ ಹೆಸರಿನಲ್ಲಿ ಕ್ಯಾಮೆರಾ ಅಳವಡಿಸುವುದನ್ನು ಬಿಟ್ಟು ಪೊಲೀಸರಿಗೆ ಅವಶ್ಯಕವಾಗಿರುವ ಔರಾದ್ಕಾರ್ ವರದಿಯನ್ನು ಸಂಪೂರ್ಣ ಜಾರಿ ಮಾಡಲು ಸರ್ಕಾರ ಮುಂದಾಗಲಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲೀಸ್ ಸಿಬ್ಬಂದಿಗೆ ಗುಣಮಟ್ಟದ ಸಾಮಗ್ರಿ ನೀಡುವುದರ ಜೊತೆಗೆ ಸುಸಜ್ಜಿತ ವಸತಿ ಗೃಹಗಳನ್ನು ನಿರ್ಮಾಣ ಮಾಡಲಿ ಎಂದು ಹೇಳಿದರು.

ರಾಜ್ಯ ಸರ್ಕಾರ ಔರಾದ್ಕಾರ್ ವರದಿಯನ್ನು ಜಾರಿಗೆ ತರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, 612 ಕೋಟಿ ವೆಚ್ಚದಲ್ಲಿ ಕ್ಯಾಮರಾ ಖರೀದಿಸುವ ಬದಲಿಗೆ ಪೊಲೀಸರಿಗೆ ಉತ್ತಮ ಗುಣಮಟ್ಟದ ಬೂಟು ಖರೀದಿಸಿ ನೀಡಲಿ ಎಂದು ಆಗ್ರಹಿಸಿದರು.

ನಿಂಬಾಳ್ಕರ್ ಮತ್ತು ರೂಪಾ ಅವರು ಪರಸ್ಪರ ಕೆಸರೆಚಾಟವನ್ನು ಮಾಡಿಕೊಂಡು ಸಾರ್ವಜನಿಕರಿಗೆ ಇಲಾಖೆಯನ್ನು ವ್ಯಂಗ್ಯದ ವಸ್ತುವನ್ನಾಗಿಸಿದ್ದಾರೆ, ಈ ಬಗ್ಗೆ ಮುಖ್ಯಮಂತ್ರಿಗಳಾಗಲಿ, ಗೃಹಸಚಿವರು ಕ್ರಮ ತೆಗೆದುಕೊಳ್ಳದೇ ಇರುವುದನ್ನು ಗಮನಿಸಿದರೆ, ಇಬ್ಬರು ನಿದ್ದೆಯಲ್ಲಿದ್ದಾರೆ ಎನಿಸುತ್ತದೆ, ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರು ಏನು ಮಾಡುತ್ತಿದ್ದಾರೆ? ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ತರಾಟೆಗೆ ತೆಗೆದುಕೊಂಡರು.

TRENDING