Tuesday, January 19, 2021
Home ರಾಜ್ಯ 'ಗೋ ಹತ್ಯೆ ನಿಷೇಧ' ಜಾರಿಗೆ ಸುಗ್ರೀವಾಜ್ಞೆ : ಸಂಪುಟ ಒಪ್ಪಿಗೆ..!

ಇದೀಗ ಬಂದ ಸುದ್ದಿ

‘ಗೋ ಹತ್ಯೆ ನಿಷೇಧ’ ಜಾರಿಗೆ ಸುಗ್ರೀವಾಜ್ಞೆ : ಸಂಪುಟ ಒಪ್ಪಿಗೆ..!

ಬೆಂಗಳೂರು, ಡಿ.28- ಪ್ರತಿ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂಗೀಕರಿಸಲ್ಪಟ್ಟಿದ್ದ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸುವ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ನಾಳೆ ರಾಜ್ಯಪಾಲ ವಿ.ಆರ್.ವಾಲಾ ಅವರ ಅಂಕಿತಕ್ಕೆ ಕಳುಹಿಸಿಕೊಡಲಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನ ಕೈಗೊಂಡಿದ್ದೇವೆ. ನಾಳೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಈ ಕಾಯ್ದೆಯು 1964ರಿಂದಲೂ ಜಾರಿಯಲ್ಲಿದೆ. ಹಿಂದಿನ ಕಾಯ್ದೆಯಲ್ಲಿ 12 ವರ್ಷ ಮೇಲ್ಪಟ್ಟ ಹಸು, 13 ವರ್ಷ ಮೇಲ್ಪಟ್ಟ ಎಮ್ಮೆಯನ್ನು ವಧೆ ಮಾಡಬಹುದೆಂಬ ನಿಯಮವಿತ್ತು. ಆದರೆ, ಹೊಸದಾಗಿ ಜಾರಿಯಾಗಿರುವ ಕಾಯ್ದೆಯಲ್ಲಿ ಯಾವುದೇ ರೀತಿಯ ಪ್ರಾಣಿಗಳನ್ನು ಹತ್ಯೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

ಅಷ್ಟಕ್ಕೂ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಹೊಸದಾಗಿ ಜಾರಿ ಮಾಡಿಲ್ಲ. ಹಿಂದೆ ಇದ್ದ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಗೋಮಾಂಸ ತಿನ್ನುವುದಕ್ಕಾಗಲಿ ಅಥವಾ ಚರ್ಮ ಮರಾಟ ಮಾಡುವುದಾಗಲಿ ಸೇರಿದಂತೆ ಇದರಡಿ ಯಾವುದೇ ರೀತಿಯ ನಿರ್ಬಂಧ ಹಾಕಿಲ್ಲ. ಗೋಹತ್ಯೆ ಮಾಡಿದವರಿಗೆ ಹಿಂದೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತಿರಲಿಲ್ಲ. ಈಗ ಈ ಹತ್ಯೆಯಲ್ಲಿ ಭಾಗಿಯಾಗುವವರಿಗೆ ಶಿಕ್ಷೆ ನೀಡುವ ಹಾಗೂ ದಂಡ ವಿಧಿಸುವ ಅಧಿಕಾರವನ್ನು ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಪೊಲೀಸರಿಗೆ ನೀಡಲಾಗಿದೆ ಎಂದು ಹೇಳಿದರು.

1964ರಿಂದ ಜಾರಿಯಲ್ಲಿದ್ದ ಕಾನೂನು ಬಿಗಿಯಾಗಿರಲಿಲ್ಲ. ಈಗಿನ ಕಾಯ್ದೆಯಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡಿದರೆ ಅದನ್ನು ವಶಕ್ಕೆ ಪಡೆಯಲಾಗುವುದು. ಅಲ್ಲದೆ ವಾಹನವನ್ನು ಬ್ಯಾಂಕ್ ಗ್ಯಾರಂಟಿ ಮೂಲಕ ಹಿಂಪಡೆಯಬಹುದು. ಗೋಹತ್ಯೆ ನಿಷೇಧವು ಆರ್‍ಎಸ್‍ಎಸ್ ಅಥವಾ ಬಿಜೆಪಿ ಅಜೆಂಡವಲ್ಲ. ರಾಷ್ಟ್ರಪಿತ ಮಹಾತ್ಮಗಾಂಧಿ ಅವರೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕೆಂದು ಹೇಳಿದ್ದರು.

ಸಂವಿಧಾನ ರಚನಾ ಸಮಿತಿಯ ಮೊದಲ ಅಧಿವೇಶನದಲ್ಲೇ ಗೋ ರಕ್ಷಣೆ ಬಗ್ಗೆ ಚರ್ಚೆಯಾಗಿತ್ತು. ಗೋಹತ್ಯೆ ಮಾಡಬಾರದೆಂಬುದಷ್ಟೇ ನಮ್ಮ ಈ ಕಾಯ್ದೆಯ ಮುಖ್ಯ ಉದ್ದೇಶ ಎಂದು ವಿವರಿಸಿದರು. ವಯಸ್ಸಾಗಿರುವ ಅಥವಾ ಕಾಯಿಲೆಗೆ ಬಿದ್ದಿರುವ ಹಸುಗಳನ್ನು ಯಾರೂ ಕೊಳ್ಳಲು ಬರುವುದಿಲ್ಲ. ಒಂದು ವೇಳೆ ರೈತರಿಗೆ ಸಾಕಲು ಸಾಧ್ಯವಾಗದಿದ್ದರೆ ಅದನ್ನು ಸರ್ಕಾರವೇ ನೋಡಿಕೊಳ್ಳಲಿದೆ. ಅದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಗೋಶಾಲೆಗಳನ್ನು ತೆರೆಯುತ್ತೇವೆ ಎಂದು ಹೇಳಿದರು.

ಸರ್ಕಾರ ಕಾಯ್ದೆಯನ್ನು ಹೊಸದಾಗಿ ತಂದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಮೂರು ದಶಕಗಳಿಂದ ಅಧಿಕಾರದಲ್ಲಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ದಿನವಾದರೂ ಈ ಕಾಯ್ದೆ ಬಗ್ಗೆ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

TRENDING