ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ ಮತ್ತು ಪಾರದರ್ಶಕವಾಗಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆ ಮತ್ತು ಮತದಾರರ ಭಾಗವಹಿಸುವಿಕೆಯು ಭಾರತಕ್ಕೆ ಹೆಮ್ಮೆಯ ಕ್ಷಣ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದರು.
ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಪ್ರಧಾನಿ, ‘ಜಮ್ಮು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೂರು ಹಂತದ ಪಂಚಾಯಿತಿ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಆದರೆ, ಕಾಂಗ್ರೆಸ್ ಆಡಳಿತವಿರುವ ಪುದುಚೇರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ’ ಎಂದರು.
‘ನನ್ನ ನೋವನ್ನು ದೇಶದ ಜನರ ಮುಂದಿಡಲು ಬಯಸುತ್ತೇನೆ. ದೆಹಲಿಯಲ್ಲಿ ಕುಳಿತ ಕೆಲವರು ನನ್ನನ್ನು ದಿನನಿತ್ಯ ನಿಂದಿಸಿದರು. ಪದೇಪದೇ ಅವರು ನನಗೆ ಪ್ರಜಾಪ್ರಭುತ್ವದ ಪಾಠ ಹೇಳುತ್ತಿದ್ದರು. ನನ್ನ ಕೆಲಸಗಳಿಗೆ ಜಮ್ಮು ಕಾಶ್ಮೀರದ ಚುನಾವಣಾ ಪ್ರಕ್ರಿಯೆಯೇ ಕನ್ನಡಿ’ ಎಂದರು.
‘2016ರಿಂದ ಪುದುಚೇರಿಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಗೆ ಅಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಇದು ಕೆಲವು ಪಕ್ಷಗಳ ಬೋಧನೆ ಮತ್ತು ಕ್ರಿಯೆಯ ನಡುವಿನ ಅಂತರವನ್ನು ತೋರಿಸುತ್ತದೆ’ ಎಂದು ಪ್ರತಿಪಕ್ಷದ ವಿರುದ್ಧ ಹರಿಹಾಯ್ದರು. 2006ರ ಬಳಿಕ ಪುದುಚೇರಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿಲ್ಲ.
‘ತೀವ್ರ ಶೀತದ ಹವಾಮಾನ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ನಡುವೆಯೇ ಜಮ್ಮು ಕಾಶ್ಮೀರದ ಜನರು ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸದ್ದಾರೆ. ವಿಜೇತರು ಜನಸಮುದಾಯದ ನಡುವಿನಿಂದ ಆರಿಸಿ ಬಂದಿದ್ದಾರೆ. ಇನ್ನೂ ಕೆಲವರು ತಮ್ಮ ಕೆಲಸದ ಮೂಲಕ ಗೆದ್ದಿದ್ದಾರೆಯೇ ವಿನಾ ಹೆಸರಿನಿಂದಲ್ಲ’ ಎಂದಿರುವ ಪ್ರಧಾನಿ, ವಂಶಾಡಳಿತವನ್ನು ಪರೋಕ್ಷವಾಗಿ ಟೀಕಿಸಿದರು. ‘ಇದು ಹೊಸ ಯುಗದ ಹೊಸ ನಾಯಕತ್ವದ ಪ್ರಾರಂಭ’ ಎಂದರು.