Wednesday, January 27, 2021
Home ಸುದ್ದಿ ಜಾಲ ಮಕರ ಜ್ಯೋತಿಯತ್ತ ಅಯ್ಯಪ್ಪ ಭಕ್ತರ ಚಿತ್ತ: ಮಣಿದ ಕೇರಳ ಸರಕಾರ

ಇದೀಗ ಬಂದ ಸುದ್ದಿ

ಮಕರ ಜ್ಯೋತಿಯತ್ತ ಅಯ್ಯಪ್ಪ ಭಕ್ತರ ಚಿತ್ತ: ಮಣಿದ ಕೇರಳ ಸರಕಾರ

ಬೆಂಗಳೂರು: ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರ ಆಗ್ರಹಕ್ಕೆ ಕೇರಳ ಸರಕಾರ ಕೊನೆಗೂ ಮಣಿದಿದೆ. 48 ತಾಸುಗಳ ಮುನ್ನ ತಪಾಸಣೆ ಮಾಡಿಸಿ, ಕೊರೊನಾ ನೆಗೆಟಿವ್‌ ಪ್ರಮಾಣಪತ್ರದೊಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದರಿಂದ ಭಕ್ತರು ಈಗ ಶಬರಿಮಲೆಯತ್ತ ಚಿತ್ತ ಹರಿಸಿದ್ದಾರೆ.

24 ತಾಸುಗಳ ಮುಂಚಿತವಾಗಿ ತಪಾಸಣೆ ಮಾಡಿ ಸಿದ ಕೊರೊನಾ ನೆಗೆಟಿವ್‌ ಪ್ರಮಾಣಪತ್ರ ಇದ್ದರೆ ಮಾತ್ರ ಅವಕಾಶ ನೀಡಿದ್ದ ಕಾರಣ ನೀಲಕ್ಕಲ್‌ನಲ್ಲಿ ಮತ್ತೂಮ್ಮೆ ತಪಾಸಣೆ ಮಾಡಿಸಬೇಕಾಗಿದ್ದ ಸಮಸ್ಯೆ ಈಗ ನಿವಾರಣೆಯಾಗಿದೆ.

ರಾಜ್ಯದವರು ಶಬರಿಮಲೆಗೆ ಹೋಗುವಾಗ ನೆಗೆಟಿವ್‌ ಪ್ರಮಾಣ ಪತ್ರ ಹೊಂದಿದ್ದರೂ ಅಲ್ಲಿಗೆ ಹೋಗುವಷ್ಟರಲ್ಲಿ 24 ತಾಸುಗಳ ಅವಧಿ ಮುಗಿದು ಹೋಗುತ್ತಿತ್ತು. ಮತ್ತೆ ತಪಾಸಣೆ ಮಾಡಿಸಬೇಕಾಗುತ್ತಿತ್ತು. ಹಣ ವ್ಯಯ ಒಂದೆಡೆಯಾದರೆ, ಇನ್ನೊಂದೆಡೆ ಫ‌ಲಿತಾಂಶ ಏನಾಗುವುದೋ ಎಂಬ ಆತಂಕ. ಇದನ್ನು ಭಕ್ತರು ಗುರುಸ್ವಾಮಿಗಳ ಮೂಲಕ ತಿರುವಾಂಕೂರು ದೇವಸ್ವಂ ಗಮನಕ್ಕೆ ತಂದಿದ್ದರು.

ಈ ವಿಚಾರವಾಗಿ ಸರಕಾರದ ಮಟ್ಟದಲ್ಲಿಯೂ ಚರ್ಚೆ ನಡೆದು ಕಾರ್ಯಪಡೆ ಸಮಿತಿಯು 24 ತಾಸುಗಳ ಬದಲಿಗೆ 48 ತಾಸುಗಳ ಪ್ರಮಾಣಪತ್ರದೊಂದಿಗೆ ಪ್ರವೇಶ ನೀಡಲು ನಿರ್ಧರಿಸಿದೆ. ಇದು ಡಿ. 27ರಿಂದ ಜಾರಿಯಾಗಲಿದೆ.

ಭಕ್ತರಿಗೆ ವರದಾನ
ಈ ನಡುವೆ ನಿತ್ಯ ಎರಡು ಸಾವಿರಕ್ಕೆ ಸೀಮಿತವಾಗಿದ್ದ ಪ್ರವೇಶ ಸಂಖ್ಯೆಯನ್ನು ಈಗ ಐದು ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದು ಯಾತ್ರೆಗಾಗಿ ಕಾಯುತ್ತಿದ್ದ ಭಕ್ತರಿಗೆ ವರದಾನವಾಗಿದ್ದು, ಮಕರಜ್ಯೋತಿಗಾದರೂ ದರ್ಶನ ಪಡೆಯಲು ನೋಂದಣಿ ಮಾಡಿಸುತ್ತಿದ್ದಾರೆ. ಡಿ. 22ರಿಂದ ಆರಂಭ ಗೊಂಡಿದ್ದು, ರಾಜ್ಯದಿಂದ ಸಾವಿರಾರು ಭಕ್ತರು ನೋಂದಣಿ ಮಾಡಿಸಿದ್ದಾರೆ.

ಮೊದಲಿಗೆ ನಿತ್ಯ 2 ಸಾವಿರ, ಶನಿವಾರ ಮತ್ತು ರವಿವಾರ 3 ಸಾವಿರ ಭಕ್ತರಿಗೆ ಮಾತ್ರ ಅವಕಾಶ ಇದ್ದ ಕಾರಣ ರಾಜ್ಯದ ಭಕ್ತರಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಮಕರಜ್ಯೋತಿ ಗಾದರೂ ಯಾತ್ರೆ ಕೈಗೊಳ್ಳಲು ಅಯ್ಯಪ್ಪ ಸ್ವಾಮಿ ದೇವಾ ಲಯ ಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ.

ಶಬರಿಮಲೆ ಯಾತ್ರಿಕರಲ್ಲಿ ಶೇ. 80ರಷ್ಟು ಕರ್ನಾಟಕ, ಆಂಧ್ರ, ತೆಲಂಗಾಣದವರು. ಸಾಮಾನ್ಯ ವಾಗಿ ಮಂಡಲ ಪೂಜೆ ವೇಳೆ ನಿತ್ಯ 50ರಿಂದ 1 ಲಕ್ಷ, ಮಕರಜ್ಯೋತಿ ವೇಳೆ 1.50 ಲಕ್ಷದಿಂದ 2 ಲಕ್ಷ ಭಕ್ತರು ದರ್ಶನ ಮಾಡುತ್ತಿದ್ದರು. ವಾರ್ಷಿಕ ಒಟ್ಟು 80 ಲಕ್ಷ ಭಕ್ತರು ದರ್ಶನ ಪಡೆಯುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಈಗ ದರ್ಶನ ವ್ಯವಸ್ಥೆ ಸೀಮಿತಗೊಳಿಸಲಾಗಿದೆ.

ವಂಚನೆಗೊಳಗಾಗದಿರಿ: ಟಿಡಿಬಿ
ನಕಲಿ ವರ್ಚುವಲ್‌ ಕ್ಯೂ ಪಾಸ್‌ಗಳನ್ನು ಅಯ್ಯಪ್ಪ ಮಾಲಾಧಾರಿಗಳಿಗೆ ನೀಡಿ ವಂಚಿಸುತ್ತಿದ್ದ ಜಾಲವನ್ನು ಕೇರಳ ಪೊಲೀಸರು ಪತ್ತೆ ಹಚ್ಚಿದ್ದಾರೆ. ತಿರುವಾಂಕೂರು ದೇವಸ್ವಂ ಬೋರ್ಡ್‌ (ಟಿಡಿಬಿ)ನ ವೆಬ್‌ಸೈಟ್‌ ಮೂಲಕ “ವರ್ಚುವಲ್‌ ಕ್ಯೂ’ ಆಯ್ಕೆಯಡಿ ಬುಕಿಂಗ್‌ ಮಾಡಿದರೆ ಮಾತ್ರ ಅಧಿಕೃತ ಎಂದು ಬೋರ್ಡ್‌ ಸ್ಪಷ್ಟಪಡಿಸಿದೆ. ಕರ್ನಾಟಕ ಸಹಿತ ಎಲ್ಲಿಯೂ ವರ್ಚುವಲ್‌ ಕ್ಯೂ ಪಾಸ್‌ಗಳನ್ನು ವಿತರಿಸುವ ಪ್ರತ್ಯೇಕ ವ್ಯವಸ್ಥೆ ಇಲ್ಲ ಎಂದು ತಿಳಿಸಿದೆ.

ಡಿ. 30ರಿಂದ ಮಕರವಿಳಕ್ಕು ಪೂಜೆ
ಶಬರಿಮಲೆಯಲ್ಲಿ ಮಂಡಲ ಪೂಜೆ ನ. 16ರಿಂದ ಪ್ರಾರಂಭವಾಗಿದ್ದು ಶನಿವಾರ (ಡಿ. 26) ಮುಕ್ತಾಯಗೊಳ್ಳಲಿದೆ. ಅನಂತರ ಡಿ. 30ರಿಂದ ಮಕರಜ್ಯೋತಿ ಪೂಜೆ ಆರಂಭವಾಗಲಿದ್ದು ಜ. 20ರ ವರೆಗೆ ನಡೆಯಲಿದೆ.

TRENDING