ಬೆಂಗಳೂರು; ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಸದಾನಂದಗೌಡ ಕಿಡಿಕಾಡಿದ್ದಾರೆ. ಯಾರು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಹಾಗೂ ಗೌರವ ಸಿಗುತ್ತದೆ ಎಂದು ಸ್ವಪಕ್ಷ ಶಾಸಕ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ಬಸವನಗೌಡ ಪಾಟೀಲ್ ಯತ್ನಾಳ್ ಯಾರು? ಅವರೇನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಲ್ಲ, ರಾಜ್ಯ ಘಟಕದ ಯಾವುದೇ ಅಧ್ಯಕ್ಷನೂ ಅಲ್ಲ. ಅಥವಾ ಯಾವುದಾದರೂ ಒಂದು ಹೇಳುವ ಸ್ಥಾನದಲ್ಲೂ ಇಲ್ಲ. ಅವರೊಬ್ಬ ಸಾಮಾನ್ಯ ಶಾಸಕ ಅಷ್ಟೇ. ದಿನ ನಿತ್ಯ ಮಾಧ್ಯಮಕ್ಕೆ ಹಾಗೂ ಹೊರಗೆ ಮಾತಾಡೋದು ಅವರಿಗೆ ಶೋಭೆ ತರುವುದಿಲ್ಲ. ಅವರು ಏನಾದರೂ ಹೇಳೋದು ಇದ್ರೆ ರಾಷ್ಟ್ರೀಯ ನಾಯಕರು ಅಥವಾ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಮಾತನಾಡಬೇಕು. ಆದರೆ ಎಲ್ಲೋ ಬಂದು ಬೀದಿಯಲ್ಲಿ ಮಾತನಾಡಿ ಅವರ ಭವಿಷ್ಯದ ಬಗ್ಗೆ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಕೆಲವರನ್ನು ಅವರರವೇ ಅರ್ಥ ಮಾಡಿಕೊಳ್ಳಬೇಕು. ಕೆಲವರಿಗೆ ಕೆಲ ಸಂದರ್ಭ, ಸಮಯ ಬರುತ್ತದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳೋದಕ್ಕೆ ಕೆಲವರು ಮಾತಾಡ್ತಾರೆ. ಇದು ನಿಜವಾಗಿಯೂ ಅವರಿಗೆ ಸರಿ ಇರೋದಿಲ್ಲ ಎಂದು ಸದಾನಂದಗೌಡ ಅವರು ಕಿಡಿ ಕಾರಿದ್ದಾರೆ.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ವಿರುದ್ಧ ಹಾಗೂ ಸ್ವಪಕ್ಷದ ಮುಖಂಡರ ವಿರುದ್ಧ ಆಗಾಗ್ಗೆ ಕೆಲ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಇತ್ತೀಚೆಗಷ್ಟೇ ನೈಟ್ ಕರ್ಫ್ಯೂ ಹೇರಿಕೆ ವಿಚಾರವಾಗಿ ಬಹಿರಂಗವಾಗಿ ಸರ್ಕಾರದ ತೀರ್ಮಾನ ವಿರೋಧಿಸಿದ್ದರು. ಅಷ್ಟೇ ಅಲ್ಲದೇ, ಪಕ್ಷದ ನಾಯಕತ್ವ ವಿಚಾರವಾಗಿ ಮಾತನಾಡಿದ್ದರು.
ಯತ್ನಾಳ್ ರಾಷ್ಟ್ರೀಯ ನಾಯಕನಲ್ಲ, ಸಾಮಾನ್ಯ ಶಾಸಕನಷ್ಟೇ ; ಸಚಿವ ಸದಾನಂದಗೌಡ
