ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದ ಬಳಿಕವಷ್ಟೇ ತಾವು ನಿದ್ರೆ ಮಾಡುವುದಾಗಿ ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಗೊಂಡಿರುವ ಮಾಜಿ ಶಾಸಕ ಸುವೆಂದು ಅಧಿಕಾರಿ ಹೇಳಿಕೆ ನೀಡಿದರು.
ಬಿಜೆಪಿ ಸೇರ್ಪಡೆಗೊಳ್ಳಲು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಇದಕ್ಕೆ ಜನರ ಅನುಮೋದನೆ ದೊರಕಿದೆ ಎಂದು ಪ್ರತಿಕ್ರಿಯಿಸಿದರು.
ತವರೂರು ಕಾಂತಿಯಲ್ಲಿ ಬೃಹತ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ಸುವೆಂದು ಅಧಿಕಾರಿ, ಈ ರೋಡ್ ಶೋಗಳು ನಾನು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂಬುದಕ್ಕೆ ಸಾಕ್ಷಿಯಾಗಿದೆ. ನನ್ನ ನಿರ್ಧಾರಕ್ಕೆ ಜನರ ಅನುಮೋದನೆ ದೊರಕಿದೆ ಎಂದು ಹೇಳಿದರು.
ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಮಾನವಾಗಿ, ಜನವರಿ 8ರಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದಾಗಿ ಸುವೇಂದು ಅಧಿಕಾರಿ ಘೋಷಿಸಿದರು.
ನಂದಿಗ್ರಾಮಕ್ಕೆ ಜನವರಿ 7ರಂದು ಮಮತಾ ಬ್ಯಾನರ್ಜಿ ಅವರನ್ನು ನಾನು ಸ್ವಾಗತಿಸುತ್ತೇನೆ. ಅವರು ಅಲ್ಲಿ ಏನನ್ನು ಹೇಳುತ್ತಾರೆ ಅವೆಲ್ಲದಕ್ಕೂ ಮರುದಿನ ನಾನು ಪ್ರತ್ಯುತ್ತರ ನೀಡಲಿದ್ದೇನೆ ಎಂದು ಹೇಳಿದರು.
2007ರ ನಂದಿಗ್ರಾಮ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಎಂಸಿ ಮಾಜಿ ನಾಯಕ ಸುವೇಂದು ಅಧಿಕಾರಿ, ಎಡಪಂಥೀಯರನ್ನು ಮಣಿಸಿ ಮಮತಾ ಬ್ಯಾನರ್ಜಿ 2011ರಲ್ಲಿ ಅಧಿಕಾರಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.